ಬೆಂಗಳೂರು,ಮಾ.4- ಗ್ರಾಮೀಣ ಹಾಗೂ ದೇಶಿ ಕ್ರೀಡೆಗಳನ್ನು ಉತ್ತೇಜಿಸಲು ರಾಜ್ಯದ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕ್ರೀಡಾಂಗಣಗಳನ್ನು ಒಟ್ಟು 504 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
( ಇಲ್ಲಿದೆ ಕಂಪ್ಲೀಟ್ ಬಜೆಟ್ ಹೈಲೈಟ್ಸ್ )
ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ಕ್ರೀಡಾಂಗಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಮೇಲ್ದರ್ಜೆಗೆ ಏರಿಸಲು ಬಳಕೆದಾರರ ಶುಲ್ಕ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಉತ್ತರ ಕನ್ನಡ, ಚಿತ್ರದುರ್ಗ, ರಾಮನಗರ, ಕೆಆರ್‍ಎಸ್, ಆಲಮಟ್ಟಿ ಹಿನ್ನೀರಿನಲ್ಲಿ ಸಾಹಸ ಕ್ರೀಡಾ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2021ನ್ನು ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.
ಈ ಕ್ರೀಡಾಕೂಟದಲ್ಲಿ 8 ಸಾವಿರಕ್ಕೂ ಅಕ ಕ್ರೀಡಾಪಟುಗಳು ಹಾಗೂ 20 ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಲಾಗುವುದು. ಕೇಂದ್ರದ ಪ್ರಾಯೋಜಕತ್ವದ ಎನ್‍ಎಸ್‍ಡಿಎಫ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಹೊಸದಾಗಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿದ್ದು 20 ಕೋಟಿ ಅನುದಾನವನ್ನು ನೀಡಲಾಗುವುದು ಎಂದರು.
2024ರ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‍ಗೆ ರಾಜ್ಯದಿಂದ ಕನಿಷ್ಠ 75 ಕ್ರೀಡಾಪಟುಗಳನ್ನು ಸಿದ್ಧ ಪಡಿಸಲು ಅಮೃತ ಕ್ರೀಡಾ ದತ್ತು ಯೋಜನೆಯಡಿ 10 ಲಕ್ಷ ರೂ.ಗಳ ವರೆಗೆ ಪ್ರತಿವರ್ಷ ಶ್ರೇಷ್ಠ ಮಟ್ಟದ ತರಬೇತಿ ಪಡೆಯಲು ವಿನಿಯೋಗಿಸಲಾಗುವುದು ಎಂದು ಹೇಳಿದರು.
