ಎಸ್.ಆರ್.ಪಾಟೀಲ್ ರಾಜೀನಾಮೆ ಹಿಂದಿನ ಮರ್ಮವೇನು..?

S-R-Patil--01

ಬೆಂಗಳೂರು, ಜೂ.3- ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಎಸ್.ಆರ್.ಪಾಟೀಲ್ ಅವರ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿಂದಿನ ಮರ್ಮವೇ ಬೇರೆ. ಉತ್ತರ ಕರ್ನಾಟಕ ಭಾಗದಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರಾದರೂ ಅದರ ಹಿಂದೆ ಬೇರೆಯದೇ ಆದ ಅಸಮಾಧಾನ, ಬೇಸರದ ಸಂಗತಿ ಇದೆ.  ಎಸ್.ಆರ್.ಪಾಟೀಲ್ ಅವರು ಸಜ್ಜನ ರಾಜಕಾರಣಿ. ಯಾರ ವಿರುದ್ಧವೂ ದನಿ ಏರಿಸಿ ಮಾತನಾಡದವರು, ಪಕ್ಷನಿಷ್ಠರು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜೀನಾಮೆ ನೀಡುವ ಸೂಚನೆ ಬಂದಾಗ ಮರು ಮಾತನಾಡದೆ ರಾಜೀನಾಮೆ ನೀಡಿದ್ದರು. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದಾಗ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲಸ ಮಾಡಿದ್ದರು.2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಯಿತು. ಕೇವಲ 78 ಸ್ಥಾನಗಳು ಬಂದವು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ತಮ್ಮ ಹಿರಿತನದ ಆಧಾರದ ಮೇಲೆ ತಾವು ಸಚಿವ ಸ್ಥಾನ ಪಡೆಯಬೇಕೆಂಬ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಪರಮೇಶ್ವರ್ ಅವರನ್ನು ಭೇಟಿ ಮಾಡಿದಾಗ ಅವರು ಆಡಿದ ಮಾತು ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಮಗೆ ಸಚಿವ ಸಂಪುಟ ಸೇರಲು ಶಿಫಾರಸು ಮಾಡಿ ಎಂದು ಪರಮೇಶ್ವರ್ ಅವರನ್ನು ಕೇಳಿದಾಗ ನೀವು ಯಾರನ್ನು ಗೆಲ್ಲಿಸಿದ್ದೀರಿ ಅವರನ್ನೇ ಕೇಳಿ ಹೋಗಿ ಎಂದು ಪರಮೇಶ್ವರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಏಕೆಂದರೆ, ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವ ಹೊಣೆಯನ್ನು ಎಸ್.ಆರ್.ಪಾಟೀಲ್ ಅವರು ಹೊತ್ತಿದ್ದರು. ನೀವು ಅವರನ್ನೇ ಕೇಳಿ ಎಂದು ಪರಮೇಶ್ವರ್ ಅವರು ಹೇಳಿದರು ಎನ್ನಲಾಗಿದೆ. ಆಗ ಎಸ್.ಆರ್.ಪಾಟೀಲ್ ಅವರು ಸಿದ್ದರಾಮಯ್ಯನವರ ಬಳಿ ಬಂದು ಈ ಬಾರಿ ನಮ್ಮನ್ನು ಕೈ ಬಿಡಬೇಡಿ, ಕಳೆದ ಬಾರಿ ನಿಮ್ಮ ಅವಧಿ ಸಂಪುಟ ವಿಸ್ತರಣೆಯಲ್ಲಿ ನಮ್ಮನ್ನು ಕೈ ಬಿಡಲಾಯಿತು. ಮೈತ್ರಿ ಸರ್ಕಾರದಲ್ಲಿ ನಮಗೆ ನೀವು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಾರೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಚುನಾವಣೆಯಲ್ಲಿ ನೀವು ಸರಿಯಾಗಿ ಕೆಲಸ ಮಾಡಿದ್ದರೆ ನಾನು 30-40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ. ಆದರೆ, ಕೇವಲ 2 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಾಯಿತು ಎಂದು ನಿರ್ಲಕ್ಷ್ಯದಿಂದ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್‍ನ ಕೆಲ ನಾಯಕರು ಕೂಡ ಎಸ್.ಆರ್.ಪಾಟೀಲ್ ಅವರನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಎಸ್.ಆರ್.ಪಾಟೀಲ್ ಅವರು ಈ ಮೈತ್ರಿ ಸರ್ಕಾರದ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಂಪೂರ್ ಅವರು ಸೋತಾಗ ನನ್ನ ಸೋಲಿಗೆ ಎಸ್.ಆರ್.ಪಾಟೀಲ್ ಅವರೇ ಕಾರಣ ಎಂದು ಪ್ರತಿಭಟನೆ ಮಾಡಿದಾಗ ಸಿದ್ದರಾಮಯ್ಯನವರು ಎಸ್.ಆರ್.ಪಾಟೀಲ್ ಪರ ದನಿ ಎತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಎಸ್.ಆರ್.ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ತಾವು ಸುಮ್ಮನಿದ್ದರೆ ನಮ್ಮನ್ನು ಯಾರೂ ಕೇಳುವುದಿಲ್ಲ, ನಮಗೆ ಯಾವ ಹುದ್ದೆಯೂ ದೊರೆಯುವ ಸಾಧ್ಯತೆಯಿಲ್ಲ ಎಂಬುದನ್ನು ಮನಗಂಡು ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Sri Raghav

Admin