ಕಾಂಗ್ರೆಸ್ ಪ್ರತಿಭಟನೆ ಹಿಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರ

Social Share

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಇಲ್ಲಸಲ್ಲದ ಆರೋಪಗಳನ್ನು ಮಾಡಲು ಆರಂಭಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರು ಈ ಹಿಂದಿನ ಚುನಾವಣೆಗಳಲ್ಲಿ ತಮ್ಮ ಆಂತರಿಕ ಕಚ್ಚಾಟದಿಂದ ತಮ್ಮವರನ್ನೇ ಸೋಲಿಸುವ ಮೂಲಕ ಸರಣಿ ಸೋಲನುಭವಿಸಿದ್ದಾರೆ. ಇದೇ ಹತಾಶೆ ಅವರನ್ನು ಕಾಡುತ್ತಿದ್ದು, ತಕ್ಷಣಕ್ಕೆ ಬಿಬಿಎಂಪಿ ಚುನಾವಣೆ ನಡೆದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಮನವರಿಕೆ ಆಗಿರುವುದರಿಂದ ಆಡಳಿತಾರೂಢ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕುಣಿಲಾರವರಿಗೆ ನೆಲ ಡೊಂಕು! ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ವಾರ್ಡ್ ಗಳ ಪುನರ್ವಿಂಗಡಣೆ ಮತ್ತು ಮೀಸಲಾತಿಯನ್ನು ಪ್ರಕಟಿಸಿದೆ. ಇದರಲ್ಲಿ ಸಾಮಾಜಿಕ ನ್ಯಾಯವನ್ನು ಕಾಪಾಡಲಾಗಿದೆ. ಮೀಸಲಾತಿ ಸಿದ್ಧಪಡಿಸುವ ಸಂದರ್ಭದಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ನುರಿತ ಅಧಿಕಾರಿಗಳ ತಂಡಗಳು ಈ ಮೀಸಲಾತಿಯನ್ನು ಸಿದ್ಧಪಡಿಸಿವೆ. ಇದರಲ್ಲಿ ನಮ್ಮ ಪಕ್ಷದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಆದರೆ, ಸತತ ಸೋಲುಗಳ ಸುಳಿಯಿಂದ ಮತ್ತು ಆಂತರಿಕ ಕಚ್ಚಾಟದಿಂದ ಹೊರ ಬರಲು ಸಾಧ್ಯವಾಗದಿರುವ ಕಾಂಗ್ರೆಸ್ ಪಕ್ಷದ ನಾಯಕರು ಮೀಸಲಾತಿ ಪ್ರಕ್ರಿಯೆಯನ್ನು ವಿರೋಧಿಸುವ ಮೂಲಕ ಕುಣಿಲಾರದವರಿಗೆ ನೆಲ ಡೊಂಕು ಎಂಬಂತೆ ವರ್ತಿಸುತ್ತಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಕಟವಾಗಿದ್ದ ಮೀಸಲಾತಿಯಂತೆ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿ ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.

ಕಾಂಗ್ರೆಸ್ ನದ್ದು ಹಿಡನ್ ಅಜೆಂಡಾ
ಕಾಂಗ್ರೆಸ್ ಪಕ್ಷ ತನ್ನ ಚುನಾವಣೆಯನ್ನು ಮುಂದಕ್ಕೆ ಹಾಕುವ ತನ್ನ ಏಕೈಕ ಹಿಡನ್ ಅಜೆಂಡಾದಿಂದಾಗಿಯೇ ಮೀಸಲಾತಿಯನ್ನು ವಿರೋಧಿಸುತ್ತಿದೆ. ಆ ಪಕ್ಷದಲ್ಲಿ ತಳಮಟ್ಟದಿಂದ ರಾಜ್ಯ ಮಟ್ಟದ ನಾಯಕರಲ್ಲಿ ಭಿನ್ನಮತ ತಲೆದೋರಿದೆ. ಯಾರೂ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರಾರಿಗೂ ಬಿಬಿಎಂಪಿ ಚುನಾವಣೆ ಬೇಡವಾಗಿದೆ. ಈ ಕಾರಣದಿಂದಲೇ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದ್ದಾರೆ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಖಾಲಿ ಡಬ್ಬ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸರ್ಕಾರಿ ಕಚೇರಿಗಳನ್ನು ಪಕ್ಷದ ಕಚೇರಿಯಂತೆ ಮಾಡಿಕೊಂಡಿತ್ತು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸರ್ಕಾರಿ ಸಿಬ್ಬಂದಿಗೆ ಮುಕ್ತವಾಗಿ ಆಡಳಿತ ನಡೆಸುವ ಸ್ವಾತಂತ್ರ್ಯ ನೀಡಲಾಗಿದೆ. ಹೀಗಿದ್ದಾಗ್ಯೂ, ಕಾಂಗ್ರೆಸ್ ಪಕ್ಷದ ನಾಯಕರು ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಲು ಯತ್ನಿಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಬಿಬಿಎಂಪಿ ಚುನಾವಣೆ ಎದುರಿಸಲು ಮುಂದಿಟ್ಟುಕೊಂಡು ಹೋಗಲು ಯಾವುದೇ ವಿಚಾರಗಳಿಲ್ಲ. ಪ್ರಸ್ತುತ ಕಾಂಗ್ರೆಸ್ ಪಕ್ಷ ಖಾಲಿ ಡಬ್ಬದಂತಾಗಿದ್ದು, ಅದರಿಂದಲೇ ಸದ್ದು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಚುನಾವಣೆ ಅಖಾಡಕ್ಕೆ ಬನ್ನಿ
ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟಿಸಿರುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಲೋಪ ಇದ್ದಲ್ಲಿ ಅದಕ್ಕೆ ಆಕ್ಷೇಪಣೆ ಸಲ್ಲಿಸಲಿ. ಅದನ್ನು ಬಿಟ್ಟು ಸುಸೂತ್ರವಾಗಿ ನಡೆಯಬೇಕಿರುವ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಷಡ್ಯಂತ್ರವನ್ನು ಕಾಂಗ್ರೆಸ್ ನಾಯಕರು ನಡೆಸಿದ್ದಾರೆ ಎಂದು ವಿಶ್ವನಾಥ್ ಟೀಕಿಸಿದರು.

ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಸಿದ್ಧರಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನೇರವಾಗಿ ಚುನಾವಣೆ ಅಖಾಡಕ್ಕೆ ಧುಮುಕಿ ತಮ್ಮ ಪೌರುಷ ತೋರಿಸಲಿ ಎಂದು ವಿಶ್ವನಾಥ್ ಪಂಥಾಹ್ವಾನ ನೀಡಿದರು.

Articles You Might Like

Share This Article