ಶ್ರೀಲಂಕಾ ಸರಣಿ ಸ್ಫೋಟ : ಬೆಂಗಳೂರಿಗೆ ಜೆಡಿಎಸ್ ಮುಖಂಡರ ನಾಲ್ಕು ಮೃತದೇಹ ರವಾನೆ

Spread the love

ನೆಲಮಂಗಲ/ಬೆಂಗಳೂರು, ಏ.24-ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ಜೆಡಿಎಸ್ ಮುಖಂಡರಾದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಗೋವೇನಹಳ್ಳಿ ಶಿವಣ್ಣ ಮತ್ತು ನಾಗರಾಜರೆಡ್ಡಿ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತರಲಾಯಿತು.

ನಂತರ ಆ್ಯಂಬುಲೆನ್ಸ್‍ಗಳ ಮೂಲಕ ಅವರವರ ನಿವಾಸಗಳಿಗೆ ಕೊಂಡೊಯ್ದಾಗ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮನಕಲಕುವಂತಿತ್ತು.

ಖುಷಿಯಿಂದ ಪ್ರವಾಸಕ್ಕೆ ಹೊರಟವರು ಶವವಾಗಿ ಮನೆಗೆ ಹಿಂತಿರುಗಿದ್ದಾರೆ ಎಂದು ಕಣ್ಣೀರು ಹರಿಸಿದ ಕುಟುಂಬ ಸದಸ್ಯರು ವಿಧಿಯಾಟಕ್ಕೆ ಮಮ್ಮಲಮರುಗಿದರು.
ಹನುಮಂತರಾಯಪ್ಪ ಅವರ ಪಾರ್ಥಿವ ಶರೀರವನ್ನು ದಾಸರಹಳ್ಳಿ ಬಳಿಯ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶಿವಣ್ಣ ಹಾಗೂ ಲಕ್ಷ್ಮೀನಾರಾಯಣ ಅವರ ಕಳೇಬರವನ್ನು ಅವರ ನಿವಾಸದ ಬಳಿ ಕೆಲಹೊತ್ತು ಇರಿಸಿ ನಂತರ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ಇನ್ನು ನಾಗರಾಜರೆಡ್ಡಿ ಅವರ ಬಿಟಿಎಂ ಲೇಔಟ್ ನಿವಾಸದಲ್ಲೂ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ಸ್ನೇಹಿತರಿಗೆ ಅಶ್ರುತರ್ಪಣ ಸಲ್ಲಿಸಿದರು.

ಮಾಜಿ ಸಚಿವ ಶಾಸಕ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಅವರೊಂದಿಗಿನ ಒಡನಾಟವನ್ನು ನೆನೆದು ಕಂಬನಿ ಮಿಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕ ಗೋಪಾಲಯ್ಯ, ಡಾ.ಶ್ರೀನಿವಾಸಮೂರ್ತಿ, ಮಂಜುನಾಥ್, ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಚ್ಚೇಗೌಡ, ಮೇಲನಗವಿ ಮಠದ ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮುಖಂಡರು ನೆಲಮಂಗಲ ಹಾಗೂ ದಾಸರಹಳ್ಳಿಯ ನಿವಾಸಗಳಿಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇಂದು ಸಂಜೆ ಲಕ್ಷ್ಮಿನಾರಾಯಣ ಅವರ ಅಂತ್ಯಕ್ರಿಯೆ ಕಾಚಕನಹಳ್ಳಿಯಲ್ಲಿ, ಶಿವಣ್ಣ ಅವರ ಅಂತ್ಯಕ್ರಿಯೆ ಗೋವೇನಹಳ್ಳಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಂದು ಸಂಜೆ ವೇಳೆಗೆ ಮಾರೇಗೌಡ, ಪುಟ್ಟರಾಜು, ತುಮಕೂರು ರಮೇಶ್ ಅವರ ಪಾರ್ಥಿವ ಶರೀರಗಳು ಬೆಂಗಳೂರು ಬರುವ ನಿರೀಕ್ಷೆ ಇದೆ.

Facebook Comments