ಶ್ರೀಲಂಕಾ ಬಾಂಬ್ ಸ್ಫೋಟ ಮೃತದೇಹಗಳ ತರಲು ಹರಸಾಹಸ

Spread the love

ಬೆಂಗಳೂರು, ಏ.23-ಶ್ರೀಲಂಕಾ ದಲ್ಲಿ ಸರಣಿ ಬಾಂಬ್ ಸ್ಫೋಟದಿಂದ ಮೃತಪಟ್ಟವರ ಪಾರ್ಥಿವ ಶರೀರವನ್ನು ಕರ್ನಾಟಕಕ್ಕೆ ತರಿಸಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಈವರೆಗೂ ಸುಮಾರು 7 ಮಂದಿ ಸಾವನ್ನಪ್ಪಿರುವುದಾಗಿ ಅಧಿಕೃತವಾಗಿ ಮಾಹಿತಿ ಸಿಕ್ಕಿದೆ. ಅವರುಗಳನ್ನು ಗುರುತಿಸುವ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ನಿನ್ನೆ ಮೂರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿತ್ತು.

ಉಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನಡೆದಿದ್ದು, ಯಾವ ಕ್ಷಣದಲ್ಲಾದರೂ ಪಾರ್ಥಿವ ಶರೀರಗಳನ್ನು ಕಳುಹಿಸಿಕೊಡುವ ಸಾಧ್ಯತೆ ಇದೆ.
ಮೃತಪಟ್ಟವರ ಸಂಬಂಧಿಕರು, ಸ್ನೇಹಿತರ ಪೈಕಿ ಕೆಲವರು ಈಗಾಗಲೇ ಶ್ರೀಲಂಕಾಗೆ ತಲುಪಿದ್ದು, ನೇರವಾಗಿ ಪಾರ್ಥಿವ ಶರೀರಗಳನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.

ಆದರೆ ಅಲ್ಲಿನ ಅಧಿಕಾರಿಗಳು ಅದಕ್ಕೆ ಒಪ್ಪಿಲ್ಲ. ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಕೃತವಾದ ಪತ್ರವನ್ನು ಕೊಟ್ಟರೆ ಮಾತ್ರ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಪಾರ್ಥಿವ ಶರೀರ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಮೇಲಾಗಿ ಈಗಾಗಲೇ ಶ್ರೀಲಂಕಾದಲ್ಲಿ ವಿಮಾನ ಸಂಚಾರ ಸೇರಿದಂತೆ ಬಹಳಷ್ಟು ವ್ಯತ್ಯಯಗಳಾಗಿವೆ. ಖಾಸಗಿಯಾಗಿ ಪಾರ್ಥಿವ ಶರೀರ ವಶಕ್ಕೆ ತೆಗೆದುಕೊಂಡರೂ ಅದನ್ನು ಕರ್ನಾಟಕಕ್ಕೆ ಸಾಗಿಸಲು ಸಾಕಷ್ಟು ಪ್ರಯಾಸ ಪಡಬೇಕಾಗಿರುವುದರಿಂದ ವೈಯಕ್ತಿಕವಾಗಿ ಯಾರೂ ತೊಂದರೆ ತೆಗೆದುಕೊಳ್ಳದಂತೆ ಮನವಿ ಮಾಡಲಾಗುತ್ತಿದೆ.

ಭಾರತೀಯ ವಿದೇಶಾಂಗ ಇಲಾಖೆಯು ಅಷ್ಟು ಮಂದಿಯ ಮೃತದೇಹಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಿದ್ದು, ಇಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ನಂತರ ಸಂಬಂಧಿಕರಿಗೆ ಹಸ್ತಾಂತರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಹೀಗಾಗಿ ನೇರವಾಗಿ ಯಾರಿಗೂ ಶವಗಳನ್ನು ಹಸ್ತಾಂತರಿಸುವುದು ಬೇಡ ಎಂಬ ಸಲಹೆಯನ್ನು ನೀಡಲಾಗಿದೆ. ಇಂದು ಸಂಜೆ 4 ಗಂಟೆಗೆ ಶ್ರೀಲಂಕಾದಿಂದ ಖಾಸಗಿ ವಿಮಾನವೊಂದು ಬರಲಿದ್ದು, ರಾತ್ರಿ 8.30ಕ್ಕೆ ಮತ್ತೊಂದು ವಿಮಾನ ಸಂಚಾರ ಮಾಡುವ ಸಾಧ್ಯತೆ ಇದೆ.

ಶಿಷ್ಟಾಚಾರದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೆ, ಕೆಲವು ಮೃತದೇಹಗಳನ್ನು ಈ ದಿನವೇ ಕಳುಹಿಸಿಕೊಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಾಳೆ ಇನ್ನೊಂದಷ್ಟು ಮೃತದೇಹಗಳು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಇದಷ್ಟೇ ಅಲ್ಲದೆ ಬಹಳಷ್ಟು ಮಂದಿ ಗಾಯಗೊಂಡು ಶ್ರೀಲಂಕಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಬೆಂಗಳೂರಿಗೆ ಕರೆತಂದು ಇಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಪ್ರಯತ್ನಗಳು ನಡೆಯುತ್ತಿವೆ.

ಗಾಯಾಳುಗಳ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿಲ್ಲ. ಸ್ನೇಹಿತರು, ಸಂಬಂಧಿಕರ ಮೂಲಕ ಅಲ್ಲೊಬ್ಬರು, ಇಲ್ಲೊಬ್ಬರು ಆಸ್ಪತ್ರೆಯಲ್ಲಿರುವ ವಿವರಗಳು ಲಭ್ಯವಾಗುತ್ತಿದ್ದು, ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ.

Facebook Comments