ಸಹಜ ಸ್ಥಿತಿಯತ್ತ ಮರಳುತ್ತಿದೆ ಶ್ರೀಲಂಕಾ, ನಾಳೆ ಸಂಸತ್ ಅಧಿವೇಶನ

Social Share

ಕೊಲೊಂಬೊ, ಜು.14- ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಮುಂದುವರೆದಿದ್ದು, ಪ್ರತಿಭಟನೆಯ ವೇಳೆ ಒಬ್ಬ ಮೃತಪಟ್ಟಿದ್ದು, 84 ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ಅಧಿಕಾರರೂಢರ ಸೂಚನೆಯ ಹೊರತಾಗಿಯೂ ಶ್ರೀಲಂಕಾ ಸೇನೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ನಿರಾಕರಿಸಿದೆ. ದೇಶಭ್ರಷ್ಟ ಅಧ್ಯಕ್ಷ ಗೋಟಬಯ ರಾಜಪಕ್ಷೆ ರಾಜೀನಾಮೆ ನೀಡದಿರುವುದು ಜನಾಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೂ ಇಂದು ಪ್ರತಿಭಟನೆಯ ಕಾವು ಸ್ವಲ್ಪ ತಗ್ಗಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ತಿರುಗಿದೆ.

ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷೆ ನಿನ್ನೆ ಶ್ರೀಲಂಕದಾ ರಾಜಧಾನಿ ಕೊಲೊಂಬೊದಿಂದ ವಾಯುಸೇನೆಯ ವಿಮಾನದಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಭದ್ರತಾ ಅಧಿಕಾರಿಗಳ ಜೊತೆ ಮಾಲ್ಡೀವ್ಸ್ಗೆ ಪರಾರಿಯಾಗಿದ್ದರು. ಅಲ್ಲಿನ ರಾಜಧಾನಿ ಮಾಲೆಯಲ್ಲಿ ಇಳಿದ ರಾಜಪಕ್ಷೆ ಇಂದು ಖಾಸಗಿ ವಿಮಾನದಲ್ಲಿ ಸಿಂಗಾಪುರ್ಗೆ ಹಾರಿದ್ದಾರೆ. ಸಿಂಗಾಪುರ್ಗೆ ಪ್ರಯಾಣಿಸಲು ಖಾಸಗಿ ವಿಮಾನ ವ್ಯವಸ್ಥೆಗಾಗಿ ರಾಜಪಕ್ಷೆ ಬಹಳ ಹೊತ್ತು ಕಾದು ಕುಳಿತುಕೊಳ್ಳಬೇಕಾಯಿತು. ದೇಶಭ್ರಷ್ಟ ಅಧ್ಯಕ್ಷ ಕೊನೆಗೂ ಮಾಲ್ಡೀವ್ಸ್ ಬಿಟ್ಟಿದ್ದು, ದೇಶದಿಂದ ದೇಶಕ್ಕೆ ಅಲೆಯಲಾರಂಭಿಸುವಂತಾಗಿದೆ.

ಈ ಮೊದಲು ಪ್ರತಿಭಟನೆ ತೀವ್ರವಾಗಿ ಸರ್ಕಾರಿ ವಿರೋ ಹೋರಾಟಗಾರರು ಅಧ್ಯಕ್ಷರ ಅರಮನೆಯನ್ನು ವಶ ಪಡಿಸಿಕೊಂಡು, ಅಲ್ಲಿನ ಈಜುಕೊಳದಲ್ಲಿ ಈಜಾಡಿ, ಜಿಮ್ನಲ್ಲಿ ಕಸರತ್ತು ನಡೆಸುವ ಹಂತಕ್ಕೆ ಬಂದಾಗ ನಿಗೂಢ ಸ್ಥಳಕ್ಕೆ ತೆರಳಿದ್ದ ಗೋಟಬಯ ರಾಜಪಕ್ಷೆ ಜು.13ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಅವರಿಗೆ ದೂರವಾಣಿಯಲ್ಲಿ ತಿಳಿಸಿದ್ದರು. ಆದರೆ ನಿನ್ನೆ ರಾಜೀನಾಮೆ ನೀಡದೆ ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಕೊಲೊಂಬೊದಲ್ಲಿ ಕಪ್ರ್ಯೂ ಜಾರಿ:
ದೇಶದ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿರುವ ಗೋಟಬಯ ರಾಜಪಕ್ಷೆ ಮತ್ತು ಪ್ರಧಾನಿ ರನೀಲ ವಿಕ್ರಮಸಿಂಘೆ ಅವರ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಅಧ್ಯಕ್ಷರು ರಾಜೀನಾಮೆ ನೀಡದೆ ಇರುವುದರಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂದು ಸಂಜೆಯ ಒಳಗೆ ರಾಜೀನಾಮೆ ನೀಡಬೇಕು ಇಲ್ಲವಾದರೆ, ಗೋಟಬಯ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆರವು ಮಾಡುವ ಕುರಿತು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸುವುದಾಗಿ ಸ್ಪೀಕರ್ ಮಹಿಂದಾ ಎಚ್ಚರಿಕೆ ನೀಡಿದ್ದಾರೆ. ನಾಳೆ ಸಂಸತ್ ಸಮಾವೇಶಗೊಳ್ಳಲಿದ್ದು, ರಾಜೀನಾಮೆ ನೀಡದೆ ಇದ್ದರೆ ಗೋಟಬಯ ಅವರನ್ನು ಪದಚ್ಯುತಗೊಳಿಸುವ ಸಾಧ್ಯತೆ ಇದೆ. ಅಕಾರ ಹಸ್ತಾಂತರ ಶಾಂತಿಯುತವಾಗಿ ನಡೆಯಬೇಕು ಎಂದು ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಸಲಹೆ ನೀಡಿವೆ.

ಗೋಟಬಯ ರಾಜಪಕ್ಷೆ ನಿನ್ನೆ ದೇಶಭ್ರಷ್ಟರಾಗುತ್ತಿದ್ದಂತೆ ಪ್ರಧಾನಿ ರನೀಲ ವಿಕ್ರಮಸಿಂಘೆ ಶ್ರೀಲಂಕಕ್ಕೆ ಕಾರ್ಯಕಾರಿ ಅಧ್ಯಕ್ಷರಾಗಿ ಅಕಾರ ವಹಿಸಿಕೊಂಡಿರುವುದಾಗಿ ಹೇಳಿದ್ದರು. ಸ್ಪೀಕರ್ ಅವರು ಅದನ್ನು ಅಂಗೀಕರಿಸಿದರು. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಕ್ರಮಸಿಂಘೆ ದೇಶದಲ್ಲಿ ನಿನ್ನೆ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಇದರಿಂದ ಸೇನೆ ರಸ್ತೆಗಿಳಿದಿತ್ತು.

ಹಲವರನ್ನು ಬಂಧಿಸಲಾಗಿತ್ತು. ಅಲ್ಲಲ್ಲಿ ಬಲಪ್ರಯೋಗಗಳು ನಡೆದಿದ್ದವು. ಆದರೂ ಜಗ್ಗದ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಅನಿವಾರ್ಯವಾಗಿ ಇಂದು ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಗಿದೆ. ರಸ್ತೆ ಸಂಚಾರ ಸಹಜ ಸ್ಥಿತಿಗೆ ಬಂದಿದೆ. ಅಂಗಡಿ, ವ್ಯಾಪಾರ ವಹಿವಾಟುಗಳು ಶುರುವಾಗಿವೆ. ಕೊಲೊಂಬ ಜಿಲ್ಲೆಯಲ್ಲಿ ಮಾತ್ರ ನಾಳೆ ಬೆಳಗ್ಗೆ 5 ಗಂಟೆವರೆಗೆ 17 ಗಂಟೆಗಳ ಕಪ್ರ್ಯೂವನ್ನು ಜಾರಿಗೊಳಿಸಲಾಗಿದೆ.

ಸರ್ಕಾರಿ ಆಸ್ತಿ ತೆರವು ಮಾಡಲು ಒಪ್ಪಿದ ಪ್ರತಿಭಟನಾಕಾರರು:
ತೀವ್ರ ಆರ್ಥಿಕ ಸಂಕಷ್ಟಕ್ಕೆ ರಾಜಪಕ್ಷೆ ಅವರ ಕುಟುಂಬದ ಆಡಳಿತವೇ ಕಾರಣ ಎಂದು ಆಕ್ರೋಶಗೊಂಡು 97 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಶ್ರೀಲಂಕ ಜನ ಕಳೆದ ನಾಲ್ಕು ದಿನಗಳಿಂದ ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದಿದ್ದಾರೆ. ಅಧ್ಯಕ್ಷ ಗೋಟಬಯ ಮತ್ತು ಅವರ ಕುಟುಂಬದ ಸದಸ್ಯರು ಅಧಿಕಾರದಿಂದ ದೂರ ಇರಬೇಕು ಎಂದು ಒತ್ತಾಯಿಸಿ ಪಕ್ಷಾತೀತವಾಗಿ ಪ್ರತಿಭಟಿಸುತ್ತಿದ್ದಾರೆ. ಗೋಟಬಯ ಅವಯಲ್ಲೇ ಪ್ರಧಾನಿಯಾಗಿ ನೇಮಕವಾದ ವಿಕ್ರಮ ಸಿಂಘೆ ಅವರ ವಿರುದ್ಧವೂ ಆಕ್ರೋಶಗಳು ಕೇಳಿ ಬಂದಿವೆ.

ಗೋಟಬಯ ಪಲಾಯನದ ಬಳಿಕ ವಿಕ್ರಮ ಸಿಂಘೆ ಅಧ್ಯಕ್ಷರಾದಾಗ ಜನ ಮತ್ತಷ್ಟು ರೊಚ್ಚಿಗೆದ್ದಿದ್ದರು. ಪ್ರಧಾನಿ ಕಚೇರಿಯ ಬಾಗಿಲನ್ನು ದೊಡ್ಡ ಮರದ ದಿಮ್ಮಿಯಿಂದ ಡಿಕ್ಕಿ ಹೊಡೆದು ಬೀಳಿಸಿ ಒಳ ನುಗ್ಗಿದ್ದಾರೆ. ಭದ್ರತಾ ಪಡೆಗಳು ಅಸ್ಸಾಹಯಕವಾಗಿ ನಿಲ್ಲುವಂತಾಗಿತ್ತು. ಪ್ರಧಾನಿ ಕಚೇರಿ ಒಳಗೆ ಹೋದ ಜನ ತಾಳ್ಮೆ ಕಳೆದುಕೊಳ್ಳದೆ ಒಳಗೆಲ್ಲಾ ವೀಕ್ಷಣೆ ಮಾಡಿದ್ದಾರೆ.

ನಿನ್ನೆಯಿಂದ ಇಂದಿನವರೆಗೂ ಪ್ರಧಾನಿ ಕಚೇರಿ ಮತ್ತು ಮನೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿತ್ತು. ಅಲ್ಲಿನ ಎಲ್ಲಾ ವಸ್ತುಗಳನ್ನು ವೀಕ್ಷಿಸಿದರು. ಈ ಮೊದಲು ಅಧ್ಯಕ್ಷರ ಅರಮನೆಗೆ ನುಗ್ಗಿದ ಪ್ರತಿಭಟನಾಕಾರರು ಅಧ್ಯಕ್ಷರ ಕುರ್ಚಿಯ ಮೇಲೆ ಕುಳಿತು ಮೋಜು ಮಾಡಿದ್ದರು. ಪ್ರಧಾನಿ ಕಚೇರಿಯಲ್ಲಿ ಆ ರೀತಿಯ ಘಟನೆಗಳಾಗಬಾರದು ಎಂಬ ಕಾರಣಕ್ಕೆ ಸೇನೆ ಪ್ರಧಾನಿ ಕುರ್ಚಿಯನ್ನು ಕಾವಲು ಕಾಯುತ್ತಿದೆ. ಜನ ಹತ್ತಿರ ಬಂದು ವೀಕ್ಷಣೆ ಮಾಡಬಹುದೇ ಹೊರತು ಅದನ್ನು ಮುಟ್ಟಲು ಯೋಧರು ಬಿಡುತ್ತಿಲ್ಲ.
ಈ ನಡುವೆ ಪ್ರತಿಭಟನಾಕಾರರು ಆಕ್ರಮಿಸಿಕೊಂಡಿರುವ ಅಧ್ಯಕ್ಷರ ಅರಮನೆ, ಪ್ರಧಾನಿ ಕಚೇರಿ, ಖಾಸಗಿ ಮನೆಗಳನ್ನು ಬಿಟ್ಟು ಶಾಂತಿಯುತವಾಗಿ ಹೊರ ಬರಲು ಒಪ್ಪಿದ್ದಾರೆ. ಇಂದು ಪ್ರಧಾನಿ ಕಚೇರಿಯನ್ನು ಭದ್ರತಾಪಡೆಗಳಿಗೆ ಒಪ್ಪಿಸಿದ್ದಾರೆ. ಸಂಸತ್ ಸುತ್ತಲೂ ಇನ್ನೂ ಜನ ಸಂದಣಿ ಕಿಕ್ಕಿರಿದಿದೆ.

ಪ್ರತಿಭಟನಾಕಾರರನ್ನು ಟೀಕಿಸಿರುವ ಪ್ರಧಾನಿ ಮತ್ತು ಹಂಗಾಮಿ ಅಧ್ಯಕ್ಷ ವಿಕ್ರಮ ಸಿಂಘೆ, ಕಾನೂನಾತ್ಮಕವಾಗಿ ಅಕಾರ ಹಸ್ತಾಂತರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಜರಿದಿದ್ದಾರೆ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ಜನ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಗುಂಡು ಹಾರಿಸಲು ಸೇನೆ ನಿರಾಕರಣೆ:
ಈ ನಡುವೆ ಪ್ರತಿಭಟನೆಯನ್ನು ಹಕ್ಕಿಕ್ಕಲು ನಿನ್ನೆ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ, ಸೇನೆಗೆ ಅಕಾರ ನೀಡಲಾಗಿತ್ತು. ಸೇನೆ ಎಲ್ಲೆಡೆ ಗಸ್ತು ತಿರುಗಿತ್ತಾದರೂ ಬಲ ಪ್ರಯೋಗಕ್ಕೆ ಮುಂದಾಗಲಿಲ್ಲ. ಸಂಸತ್ ಸುತ್ತಲೂ ಹೆಲಿಕಾಫ್ಟರ್ ಸುತ್ತಾಟದ ಮೂಲಕ ವೈಮಾನಿಕ ನಿಗಾ ಇಡಲಾಗಿತ್ತು. ಪ್ರತಿಭಟನೆ ತೀವ್ರ ಇರುವ ಕಡೆ ಗುಂಡು ಹಾರಿಸಿ ನಿಯಂತ್ರಿಸುವಂತೆ ಸೇನೆಗೆ ಆದೇಶಿಸಲಾಗಿತ್ತು ಎನ್ನಲಾಗಿದೆ. ಆದರೆ ಸೇನೆ ಜನರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ನಿನ್ನೆ ಪರಿಸ್ಥಿತಿ ಕೈ ಮೀರಿದಾಗ ಲಾಠಿ ಜಾರ್ಚ್ ಮಾಡಿ, ಅಶ್ರುವಾಯು ಸಿಡಿಸಲಾಗಿದೆ. ಅಶ್ರುವಾಯು ಸಿಡಿತದಿಂದ ಘಾಸಿಗೊಂಡು 26 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆದರೆ ಅದಿನ್ನು ಖಚಿತ ಪಟ್ಟಿಲ್ಲ. ಸುಮಾರು 84 ಮಂದಿ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದಾರೆ. ಬೌದ್ಧಬಿಕ್ಕುಗಳು ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಪ್ರತಿಭಟನಾಕಾರರು ನಿನ್ನೆ ಸೇನಾಕಾರಿಗಳ ಬಳಿ ಇದ್ದ ಟಿ-56 ಬಂದೂಕು ಮತ್ತು 60 ಗುಂಡುಗಳಿದ್ದ ಎರಡು ಮ್ಯಾಗ್ಜೀನ್ಗಳನ್ನು ಕಸಿದುಕೊಂಡಿದ್ದಾರೆ ಎಂದು ಬೆರೆಲ್ಲಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಅಧ್ಯಕ್ಷರ ರಾಜೀನಾಮೆ ತಡವಾಗಿದ್ದರಿಂದ ಅಕಾರ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ವಿರೋಧ ಪಕ್ಷಗಳು ರನೀಲ ವಿಕ್ರಮಸಿಂಘೆಯವರನ್ನು ಹಂಗಾಮಿ ಅಧ್ಯಕ್ಷರು ಎಂದು ಒಪ್ಪಿಕೊಳ್ಳಲು ನಿರಾಕರಿಸಿವೆ.

ಆಡಳಿತ ಮತ್ತು ವಿರೋಧ ಪಕ್ಷಗಳು ಒಪ್ಪಿತ ಪ್ರಧಾನಿ ಮತ್ತು ಅಧ್ಯಕ್ಷರನ್ನು ಸ್ಪೀಕರ್ ಅವರು ಆಯ್ಕೆ ಮಾಡಬೇಕು. ಆವರೆಗೂ ಸ್ಪೀಕರ್ ಅವರೆ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡಬೇಕು ಎಂಬ ಒತ್ತಡ ಹೇರಿವೆ. ನಾಳೆ ನಡೆಯುವ ಸಂಸತ್ ಅವೇಶನ ಶ್ರೀಲಂಕದ ರಾಜಕಾರಣವನ್ನು ನಿರ್ಧರಿಸಲಿದೆ.

Articles You Might Like

Share This Article