ಕೊಲೊಂಬೊ, ಜು.15- ಸಾಮೂಹಿಕ ಪ್ರತಿಭಟನೆಗಳು ಕೊನೆಗೂ ಫಲ ನೀಡಿದ್ದು, ಶ್ರೀಲಂಕ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಷೆ ರಾಜೀನಾಮೆ ನೀಡಿದ್ದು, ಏಳು ದಿನಗಳ ಒಳಗಾಗಿ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ನಾಳೆ ಶ್ರೀಲಂಕ ಸಂಸತ್ ಸಮಾವೇಶಗೊಳ್ಳಲಿದೆ.
ಇಂದು ಬೆಳಗ್ಗೆ ಸಂಸತ್‍ನ ಸ್ಪೀಕರ್ ಮಹಿಂದ ಯಾಪ ಅಬೈವರ್ಧನ ಅವರು ಪ್ರಕಟಣೆ ಹೊರಡಿಸಿದ್ದು, ಅಧಿಕೃತವಾಗಿ ರಾಜೀನಾಮೆ ವಿಷಯವನ್ನು ಘೋಷಿಸಿದ್ದಾರೆ. ಈ ಮೂಲಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ಚಾಲುಗೊಂಡಿವೆ.
ಸಂಸತ್ತಿನಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರು ಇಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸ್ಪೀಕರ್ ತಿಳಿಸಿದ್ದಾರೆ.
ಶ್ರೀಲಂಕಾ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯದ ಸಂವಿಧಾನದ ಸೆಕ್ಷನ್ 38.1 (ಬಿ) ಅಡಿಯಲ್ಲಿ ನಾನು ಘನತೆವೆತ್ತ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ.
ಅದರಂತೆ 2022ರ ಜುಲೈ 14ರಿಂದ ಜಾರಿಗೆ ಬರುವಂತೆ ಅಧ್ಯಕ್ಷರು ಕಾನೂನುಬದ್ಧವಾಗಿ ತಮ್ಮ ಕಾನೂನು ಬದ್ಧ ಕರ್ತವ್ಯಗಳು ಮತ್ತು ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕಾರಗೊಂಡ ಬಳಿಕ ಹೊಸ ಅಧ್ಯಕ್ಷರ ನೇಮಕದ ಸಾಂವಿಧಾನಿಕ ಕಾರ್ಯವಿಧಾನವನ್ನು ಸಕ್ರಿಯಗೊಳಿಸಲಾಗಿದೆ ಎಂದು ಸ್ಪೀಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಆಯ್ಕೆಯ ಸಾಂವಿಧಾನಿಕ ಕಾರ್ಯವಿಧಾನ ಮುಗಿಯುವವರೆಗೆ, ಸಂವಿಧಾನದ ಪ್ರಕಾರ ಪ್ರಧಾನ ಮಂತ್ರಿ ಆಗಿರುವವರು ಅಧ್ಯಕ್ಷರ ಕಾರ್ಯಗಳು, ಕರ್ತವ್ಯಗಳು ಮತ್ತು ಅಧ್ಯಕ್ಷರ ಕಚೇರಿಯ ಅಕಾರಗಳ ಮೇಲ್ವಿಚಾರಣೆ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಅಧ್ಯಕ್ಷರನ್ನು ಆಯ್ಕೆ ಮಾಡಲು ಕರೆದಿರುವ ಪಕ್ಷದ ನಾಯಕರ ಸಭೆಯಲ್ಲಿ ವಿಶೇಷ ನಿಬಂಧನೆಗಳ ಕಾಯಿದೆ ಪಾಲನೆ ಮಾಡಲಾಗುವುದು. ಶ್ರೀಲಂಕಾ ಸಂವಿಧಾನದ 1981ರ 2 ಮತ್ತು 11 ಹಾಗೂ 40 ನೇ ವಿಧಿ ಪ್ರಕಾರ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮತ್ತು ತ್ವರಿತವಾಗಿ ಪೂರ್ಣಗೊಳಿಸುವುದು ತಮ್ಮ ಉದ್ದೇಶವಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.
ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಶ್ರೀಲಂಕದಲ್ಲಿ ಸಂಕಷ್ಟ ಸಂದರ್ಭದಲ್ಲಿ ಅಧ್ಯಕ್ಷರ ಆಯ್ಕೆಯನ್ನು ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪೂರ್ಣಗೊಳಿಸುವುದು ಶ್ರೀಲಂಕಾದ ಇತಿಹಾಸದಲ್ಲಿ ಮಾತ್ರವಲ್ಲ, ವಿಶ್ವದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ.
ಎಲ್ಲಾ ಪಕ್ಷದ ನಾಯಕರು, ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಇದಕ್ಕಾಗಿ ಗರಿಷ್ಠ ಸಹಕಾರ ಕೊಡಬೇಕು. ಶ್ರೀಲಂಕಾದ ಗೌರವಾನ್ವಿತ ನಾಗರಿಕರು ಸಂಸತ್ತಿನ ಎಲ್ಲಾ ಸದಸ್ಯರು ಮುಕ್ತವಾಗಿ ಸಂಸತ್ತಿಗೆ ಹಾಜರಾಗಲು ಮತ್ತು ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ದೇಶದಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸಿ ಎಂದು ವಿಶೇಷ ಮನವಿ ಮಾಡಿದ್ದಾರೆ.
ನಿರ್ಭೀತ ವಾತಾವರಣದಲ್ಲಿ ಎಲ್ಲರ ಸಹಾಯದಿಂದ ಏಳು ದಿನಗಳ ಅಲ್ಪಾವಧಿಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವುದು ತಮ್ಮ ಉದ್ದೇಶ. ಪ್ರಕ್ರಿಯೆಗೆ ಚಾಲನೆ ನೀಡಲು ನಾಳೆ (ಜು.16) ಸಂಸತ್ತು ಸಭೆ ಸೇರಲಿದ್ದು, ಅಂದು ಎಲ್ಲಾ ಸದಸ್ಯರು ಹಾಜರಾಗುವಂತೆ ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.
ವಿದೇಶಿ ವಿನಿಮಯ ಕೊರತೆಯಿಂದ ದುರ್ಬರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಧ್ಯಕ್ಷರ ಅರಮನೆ, ಪ್ರಧಾನಿ ಕಚೇರಿ, ಮನೆಗಳಿಗೆ ನುಗ್ಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜನರ ಸಿಟ್ಟಿನ ಪ್ರತಿಭಟನೆ ನಿಗ್ರಹಿಸಲಾಗದಷ್ಟು ಉಗ್ರ ಸ್ವರೂಪ ತಲುಪಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು ಹೋರಾಟ ಹತ್ತಿಕ್ಕಲಾಗಲಿಲ್ಲ. ಅಲ್ಲಲ್ಲಿ ನಡೆದ ಸಣ್ಣಪುಟ್ಟ ಅಹಿತಕರ ಘಟನೆಗಳಿಂದ ಒಬ್ಬ ಮೃತಪಟ್ಟಿದ್ದು ಸುಮಾರು 100 ಮಂದಿ ಗಾಯಗೊಂಡಿದ್ದರು. ಶ್ರೀಲಂಕದ ಅಧ್ಯಕ್ಷರು ಮತ್ತು ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಪ್ರತಿಭಟನಾಕಾರದ್ದಾಗಿತ್ತು.
ಕಳೆದ ಏಳು ದಿನಗಳಿಂದ ತೀವ್ರಗೊಂಡ ಪ್ರತಿಭಟನೆಯಲ್ಲಿ ಜನ ಅಧ್ಯಕ್ಷರ ಅರಮನೆಗೆ ನುಗ್ಗಿದಾಗ ಕಳೆದ ಶನಿವಾರ ಅಧ್ಯಕ್ಷ ಗೋಟಬಯ ರಾಜಪಕ್ಷೆ ಭೂಗತರಾಗಿದ್ದರು. ಜು.13ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಆದರೆ ರಾಜೀನಾಮೆ ನೀಡದೆ ರಾಜಧಾನಿ ಕೊಲೊಂಬೊದಿಂದ ವಾಯುಸೇನೆಯ ವಿಮಾನದಲ್ಲಿ ಇಬ್ಬರು ಭದ್ರತಾ ಅಧಿಕಾರಿಗಳು ಹಾಗೂ ಪತ್ನಿ ಸಹಿತ ದೇಶ ಬಿಟ್ಟು ಪರಾರಿಯಾಗಿದ್ದರು. ಮೊದಲು ಮಾಲ್ಡೀವ್ಸ್‍ನ ರಾಜಧಾನಿ ಮಾಲೆಯಲ್ಲಿ ಇಳಿದರು.
ಮಾರನೆ ದಿನ ಖಾಸಗಿ ವಿಮಾನದಲ್ಲಿ ಸಿಂಗಾಪುರ್‍ಗೆ ಪ್ರಯಾಣಿಸಿದರು. ಆ ವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದ ಅವರನ್ನು ವಜಾಗೊಳಿಸುವ ತಯಾರಿಗಳು ನಡೆದಿದ್ದವು. ಮೂಲಗಳ ಪ್ರಕಾರ ಇಂದು ಶ್ರೀಲಂಕಾ ಸಂಸತ್ ಸಮಾವೇಶಗೊಂಡು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಆರಂಭಿಸುವುದರಲ್ಲಿತ್ತು. ಆದರೆ ನಿನ್ನೆ ಸಂಜೆ ಗೋಟಬಯ ಅವರು ಇ-ಮೇಲ್ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಇಂದು ಸೇರಬೇಕಿದ್ದ ಸಂಸತ್ ನಾಳೆ ಸಮಾವೇಶಗೊಳ್ಳಲಿದೆ.
ಸದ್ಯಕ್ಕೆ ಪ್ರಧಾನಿ ರನೀಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿದ್ದರು, ಇಂದು ತಾತ್ಕಾಲಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ ಅಧ್ಯಕ್ಷ ಹಾಗೂ ಪ್ರಧಾನಿ ಆಯ್ಕೆಯಾದ ಬಳಿಕ ತಾವು ಹುದ್ದೆ ತೊರೆಯುವುದಾಗಿ ವಿಕ್ರಮಸಿಂಘೆ ಘೋಷಿಸಿದ್ದಾರೆ. ಪ್ರತಿಭಟನಾಕಾರರು ಅವರ ವಿರುದ್ಧ ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದರು.