ಕೊಲಂಬೊ,ಜು.25- ತೀವ್ರ ಪ್ರತಿಭಟನೆಗಳಿಂದ ಮುಚ್ಚಲ್ಪಟ್ಟಿದ್ದ ಶ್ರೀಲಂಕಾದ ಅಧ್ಯಕ್ಷರ ಕಚೇರಿ ಸೋಮುವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ. ತೀವ್ರ ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೀಡಾಗಿದ್ದ ಸಾರ್ವಜನಿಕರು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದರು.
ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸೆ ಮತ್ತು ಪ್ರಧಾನಿಯಾಗಿದ್ದ ರಣೀಲ ವಿಕ್ರಮ ಸಿಂಘೆ ಅವರ ರಾಜೀನಾಮೆಗೆ ಒತ್ತಾಯಿಸಿ ಅಧ್ಯಕ್ಷರ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು.
ಅಲ್ಲಿರುವ ಈಜುಕೊಳ ಮತ್ತು ಜಿಮ್ಗಳನ್ನು ಬಳಸಿದ್ದರು. ಜನರಿಂದ ಆಕ್ರಮಿಸಲ್ಪಟ್ಟ ಅಧ್ಯಕ್ಷರ ಕಚೇರಿಯಲ್ಲಿ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಭದ್ರತಾ ಸಿಬ್ಬಂದು ಅಸಹಾಯಕರಾಗಿದ್ದರು. ಗೋಟಬಯ ರಾಜಪಕ್ಸೆ ದೇಶ ಬಿಟ್ಟು ಪರಾರಿಯಾದರು.
ನಂತರದ ಬೆಳವಣಿಗೆಯಲ್ಲಿ ಸಂಸತ್ ಅವೇಶನ ನಡೆದು ಪ್ರಧಾನಿಯಾಗಿದ್ದ ರಣೀಲ ವಿಕ್ರಮ ಸಿಂಘೇ ಸವೋಚ್ಛ ಅಧಿಕಾರ ಹೊಂದಿರುವ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಬಳಿಕ ಸೇನೆ ಮಧ್ಯಪ್ರವೇಶ ಮಾಡಿ ಪ್ರತಿಭಟನೆಗಳನ್ನು ನಿಭಾಯಿಸಿದೆ. ಪರಿಸ್ಥಿತಿ ತಿಳಿಗೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷರ ಕಚೇರಿ ಪುನರಾರಂಭವಾಗಿದೆ.