ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದು ಕಂಗಾಲಾದ ಶ್ರೀಲಂಕಾ ಸರ್ಕಾರ ..!

ಕೊಲಂಬೋ, ಏ.23-ಈಸ್ಟರ್ ಸಂಡೆ ದಿನದಂದು 310ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಎಂಟು ಸರಣಿ ಸ್ಫೋಟದಿಂದ ಶ್ರೀಲಂಕಾ ಸರ್ಕಾರವೇ ಹೆದರಿ ಕಂಗಲಾಗಿದೆ.

ಇಷ್ಟು ತೀವ್ರತೆಯ ಬಾಂಬ್ ದಾಳಿಗಳನ್ನು ದ್ವೀಪರಾಷ್ಟ್ರದ ಸರ್ಕಾರ ನಿರೀಕ್ಷಿಸಿರಲಿಲ್ಲ. ಒಂದು ದಶಕದ ನಂತರ ನಡೆದ ಭಯೋತ್ಪಾದಕರ ಪೈಶಾಚಿಕ ಕೃತ್ಯದಿಂದ ಕಂಗೆಟ್ಟಿರುವ ರಕ್ಷಣಾ ಇಲಾಖೆಯೂ ಕೂಡ ಮುಂದೆ ಇದೇ ರೀತಿಯ ದಾಳಿಗಳು ನಡೆಯಬಹುದೆಂಬ ಆತಂಕದಲ್ಲಿದೆ.

ಆತ್ಮಾಹತ್ಯಾ ದಾಳಿ ನಡೆಯುವ ಸಾಧ್ಯತೆ ಬಗ್ಗೆ ನಮಗೆ 10 ದಿನಗಳ ಮುನ್ನವೇ ಗುಪ್ತಚಾರ ಮಾಹಿತಿ ಇತ್ತು. ಆದರೆ ಇಷ್ಟು ಪ್ರಬಲ ಸ್ವರೂಪದಲ್ಲಿ ಬಾಂಬ್ ದಾಳಿಗಳು ನಡೆದು ಸಾವು-ನೋವುಗಳು ಸಂಭವಿಸುತ್ತವೆ ಎಂಬುದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಆತಂಕದಿಂದ ಪ್ರತಿಕ್ರಿಯಿಸಿದ್ದಾರೆ.

ಶ್ರೀಲಂಕಾದಲ್ಲಿ ಸಾಕಷ್ಟು ಚರ್ಚೆಗಳು ಇವೆ. ಏಕಕಾಲದಲ್ಲಿ ಸರಣಿ ಬಾಂಬ್ ದಾಳಿಗಳು ನಡೆದಾಗ ಎಲ್ಲ ಪ್ರಾರ್ಥನಾ ಮಂದಿರಗಳಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ. ಎಂದು ಫರ್ನಾಂಡೋ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಐಎಸ್‍ಎಸ್ ಭಯೋತ್ಪಾದನೆ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸ್ಥಳೀಯ ನ್ಯಾಷನಲ್ ಥವೀಡ್ ಜಮಾತ್(ಎನ್‍ಟಿಜೆ) ಉಗ್ರಗಾಮಿ ಬಣದ ಏಳು ಮಾನವ ಬಾಂಬರ್‍ಗಳು ಐದು ಚರ್ಚ್‍ಗಳು ಮತ್ತು ಮೂರು ಐಷಾರಾಮಿ ಹೋಟೆಲ್‍ಗಳ ಮೇಲೆ ಸರಣಿ ಬಾಂಬ್ ದಾಳಿ ನಡೆಸಿದರು.

ಈ ವಿಧ್ವಂಸಕ ಕೃತ್ಯಗಳಲ್ಲಿ ಎಂಟು ಭಾರತೀಯರೂ ಸೇರಿದಂತೆ 300ಕ್ಕೂ ಹೆಚ್ಚು ಜನರು ಹತರಾಗಿ, 500ಕ್ಕೂ ಅಧಿಕ ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ನಾಪತ್ತೆಯಾದ ಕೆಲ ಮಂದಿಯ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ.

ಬಂಧಿತ 24 ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ದಾಳಿ ಸಾಧ್ಯತೆ ಬಗ್ಗೆ ಮಾಹಿತಿ ಲಭಿಸಿರುವುದರಿಂದ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಮೂರು ನಿಮಿಷ ರಾಷ್ಟ್ರೀಯ ಮೌನಾಚರಣೆ:  ಈಸ್ಟರ್ ಸಂಡೇ ದಿನದಂದು ಭಯೋತ್ಪಾದಕರ ದಾಳಿಗೆ ಹತರಾದ 310ಕ್ಕೂ ಹೆಚ್ಚು ಜನರ ಗೌರವಾರ್ಥ ರಾಷ್ಟ್ರವ್ಯಾಪಿ ಮೂರು ನಿಮಿಷಗಳ ಮೌನಾಚರಣೆ ಮಾಡಲಾಯಿತು.

Sri Raghav

Admin