ಅತಿಥಿ ಉಪನ್ಯಾಸಕರ ಖಾಯಂಗೆ ಆಗ್ರಹ

Social Share

ಬೆಂಗಳೂರು, ಜ.5- ಪದವಿ ಹಾಗೂ ಪಿಯುಸಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಕಳೆದ 26 ದಿನಗಳಿಂದ ತರಗತಿ ಬಹಿಷ್ಕರಿಸಿ ಧರಣಿ ಮಾಡುತ್ತಿದ್ದಾರೆ.
ಈ ಹಿಂದೆ ಗುತ್ತಿಗೆ, ಅರೆಕಾಲಿಕ ಉಪನ್ಯಾಸಕರನ್ನು ಖಾಯಂಗೊಳಿಸಿರುವ ನಿದರ್ಶನವಿದೆ. ಹೀಗಾಗಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡುವುದು ಪರಿಹಾರವಲ್ಲ. ಅವರಿಗೆ ಸೇವಾ ಭದ್ರತೆ ನೀಡಬೇಕು ಎಂದರು. ರಾಜ್ಯದಲ್ಲಿ 2.86 ಲಕ್ಷ ವಿವಿಧ ಹುದ್ದೆಗಳು ಖಾಲಿ ಇವೆ. 14, 480 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಖಾಯಂ ಮಾಡುವುದು ವಿಳಂಬವಾದರೂ ಅಡ್ಡಿಯಿಲ್ಲ. ಅವರನ್ನು ಖಾಯಂ ಮಾಡುವುದಾಗಿ ಘೋಷಿಸಿದರೆ ಎಂದಿನಂತೆ ಪಾಠ ಮಾಡಲಿದ್ದಾರೆ ಎಂದರು.
ಹೈಕೋರ್ಟ್ ಸೂಚನೆಯಂತೆ ವಸತಿ ಶಾಲೆಗಳ ಶಿಕ್ಷಕರನ್ನು ಖಾಯಂಗೊಳಿಸಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದರು. ರಾಮನಗರದಲ್ಲಿ ಸಿಎಂ ಸಮ್ಮುಖದಲ್ಲೇ ನಡೆದ ಘಟನೆಯನ್ನು ಜೆಡಿಎಸ್ ಖಂಡಿಸಲಿದೆ. ರಾಮನಗರದ ಅಭಿವೃದ್ಧಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕೊಡುಗೆ ಶೂನ್ಯ. ಮಾಜಿ ಮುಖ್ಯಮಂತ್ರಿ ಎಸ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಡಳಿತಾವಯಲ್ಲಿ ಜಿಲ್ಲಾ ಕೇಂದ್ರವಾಗಿ ಮಾಡಿದರು. ಅಲ್ಲದೆ ಜಿಲ್ಲಾಡಳಿತ ಕಚೇರಿ, ಎಸ್‍ಪಿ ಕಚೇರಿ, ಜಿಪಂ ಸಭಾಂಗಣ, ಮಿನಿ ವಿಧಾನಸೌಧ, ಹೊಸ ಬಂದೀಖಾನೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ ಎಂದು ವಿವರಿಸಿದರು.
ಆರೋಗ್ಯ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲು ನಿವೇಶನ ಮತ್ತು ಹಣ ಮಂಜೂರು ಮಾಡಲಾಗಿದೆ. ಅದನ್ನು ಅನುಷ್ಠಾನಗೊಳಿಸಬೇಕು ಎಂದರು. ಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ರಾತ್ರಿ ಕಫ್ರ್ಯೂ ಜಾರಿಯಿಂದ ಕೋವಿಡ್ ಸೋಂಕು ತಡೆಯಲು ಸಾಧ್ಯವೇ. ರಾಷ್ಟ್ರೀಯ ಸಮಾವೇಶಗಳು ನಡೆಯುತ್ತಿಲ್ಲವೇ, 1 ರಿಂದ 9ನೆ ತರಗತಿ ಶಾಲೆ ಬಂದ್ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಖಾಸಗಿ ಶಾಲೆ ಶಿಕ್ಷಕರಿಗೆ ಸಂಬಳ ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಶೇ.70ರಷ್ಟು ಶಿಕ್ಷಕರಿಗೆ ಈಗಾಗಲೇ ಘೋಷಿಸಿರುವ ಕೋವಿಡ್ ಪರಿಹಾರವೂ ಸಿಕ್ಕಿಲ್ಲ. ಶಾಲೆಗಳ ಮಾನ್ಯತಾ ನವೀಕರಣ ತಲೆ ನೋವಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಒಂದೇ ರೀತಿಯ ಮಾನದಂಡವಿರಬೇಕು ಎಂದರು. ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದೆ. ಸರ್ಕಾರ ಆದ್ಯತೆ ಮೇರೆಗೆ ಅವುಗಳಿಗೆ ಒತ್ತು ನೀಡಬೇಕು ಎಂದರು.

Articles You Might Like

Share This Article