ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ: ಶ್ರೀರಾಮುಲು

Social Share

ಬೆಂಗಳೂರು,ಅ.17- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಲಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪರಿಶಿಷ್ಟ ಜಾತಿಗೆ ಶೇ.15ರಿಂದ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ರಷ್ಟು ಮೀಸಲಾತಿ ಹೆಚ್ಚಿಸಲು ತೀರ್ಮಾನಿಸಲಾಗಿದ್ದು ಇದನ್ನು ಅನುಷ್ಠಾನಗೊಳಿಸಲು ಸುಗ್ರಿವಾಜ್ಞೆ ಹೊರಡಿಸಲಾಗುತ್ತಿದೆ ಎಂದರು.

ಈಗಾಗಲೇ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಕಾನೂನು ಇಲಾಖೆ ಪ್ರಕ್ರಿಯೆಯನ್ನು ಆರಂಭಿಸಿದೆ. ಒಂದೆರಡು ದಿನಗಳಲ್ಲಿ ಸುಗ್ರಿವಾಜ್ಞೆ ಹೊರಡಿಸಲಿದ್ದು, ನಂತರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ಬಳಿಕ ಇದು ಅನುಷ್ಠಾನಕ್ಕೆ ಬರಲಿದೆ ಎಂದರು.

ಬೇರೆ ಬೇರೆ ರಾಜ್ಯಗಳಲ್ಲಿ ಈ ಎರಡು ಸಮುದಾಯಕ್ಕೆ ಮೀಸಲಾತಿಯನ್ನು ಯಾವ ರೀತಿ ಹೆಚ್ಚಳ ಮಾಡಿದೆ ಎಂಬುದನ್ನು ಅಧ್ಯಯನ ನಡೆಸಿದ್ದೇವೆ. ಸಂವಿಧಾನ ಷೆಡ್ಯುಲ್ 9ಗೆ ಸೇರ್ಪಡೆ ಮಾಡುವುದರಿಂದ ಯಾವುದೇ ಕಾನೂನಿನ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಬಸ್ ಖರೀದಿ: ಸಾರಿಗೆ ಇಲಾಖೆಯ ನಿಗಮಗಳಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಕಿ.ಮೀ ಸಂಚಾರ ನಡೆಸಿರುವ ವಾಹನಗಳಿವೆ. ತಾಂತ್ರಿಕವಾಗಿ ಇವುಗಳು ಸಂಚರಿಸುವುದು ಪ್ರಯಾಣಿಕರ ದೃಷ್ಟಿಯಿಂದ ಸರಿಯಲ್ಲ. ಹೀಗಾಗಿ 4 ಸಾವಿರಕ್ಕೂ ಅಕ ಬಸ್‍ಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದೇವೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಸ್‍ಗಳ ಖರೀದಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಜಿಲ್ಲಾ ಖನಿಜ ಅನುದಾನದಡಿ 600 ಬಸ್‍ಗಳನ್ನು ಖರೀದಿಸಲು ತೀರ್ಮಾನಿಸಿದ್ದೇವೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಮುಗಿಯಲಿದೆ ಎಂದರು.
ಇದೇ ರೀತಿ ಬೇರೆ ಬೇರೆ ನಿಗಮಕ್ಕೆ ಬಸ್‍ಗಳನ್ನು ಖರೀದಿ ಮಾಡಬೇಕಾದ ಅಗತ್ಯವಿದೆ. ಕೆಲವು ಕಡೆ 9 ಲಕ್ಷ, 10 ಲಕ್ಷ , 11-12 ಲಕ್ಷ ಕಿ.ಮೀವರೆಗೂ ಬಸ್‍ಗಳು ಸಂಚರಿಸಿವೆ. ಆದ್ಯತೆ ಮೇರೆಗೆ ನಿಗಮಗಳಿಗೆ ಬಸ್‍ಗಳನ್ನು ಖರೀದಿಸಲಿದ್ದೇವೆ.

ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ವಿದ್ಯುತ್ ವಾಹನಗಳನ್ನು ಖರೀದಿಸುವ ಆಲೋಚನೆ ಇದೆ ಎಂದು ವಿವರಿಸಿದರು. 2030ರೊಳಗೆ ರಾಜ್ಯಾದ್ಯಂತ ಡೀಸೆಲ್ ವಾಹನಗಳನ್ನು ಮುಕ್ತಗೊಳಿಸಿ ಎಲ್ಲ ಕಡೆ ವಿದ್ಯುತ್ ವಾಹನಗಳನ್ನು ಬಳಸಲು ಗಂಭೀರ ಚಿಂತನೆ ನಡೆದಿದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುವ ವಾಹನಗಳನ್ನು ಬಳಕೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೆಲವು ವಾಹನಗಳು ಸಂಚಾರ ಮಾಡುವ ಸಾಮಥ್ರ್ಯ ಹೊಂದಿಲ್ಲ. ಹಾಗಾಗಿ ಎಲ್ಲೆಲ್ಲಿ ಇಂತಹ ವಾಹನಗಳು ಇವೆಯೋ ಅವನ್ನು ಗುಜರಿಗೆ ಸೇರಿಸಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕೋವಿಡ್‍ಗೂ ಮುನ್ನ 2000 ಬಸ್ ಚಾಲಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಆ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಪ್ರಕ್ರಿಯೆ ಹಾಗೇ ಉಳಿದಿತ್ತು. ಇದೀಗ ವೈದ್ಯರಿಂದ ದೈಹಿಕ ಪ್ರಮಾಣ ಪತ್ರ ಬರೆದು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆಗೆ ಪ್ರತಿದಿನ ಕನಿಷ್ಟ 100 ಕೋಟಿ ನಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಸಿಬ್ಬಂದಿ ಗಳಿಗೆ ತೊಂದರೆಯಾಗದಂತೆ ವೇತನ ಪಾವತಿಸಿದ್ದೇವೆ. ವೇತನ ವಿಳಂಬ ಧೋರಣೆಯನ್ನು ತಪ್ಪಿಸಲು ತಿಂಗಳ ಮೊದಲ ವಾರದಲ್ಲೇ ವೇತನವನ್ನು ನೀಡುತ್ತಿದ್ದೇವೆ.

ಸರ್ಕಾರ ನಮ್ಮ ಇಲಾಖೆಗೆ 600 ಕೋಟಿ ಅನುದಾನ ಸಹ ನೀಡಿದ್ದಾರೆ. ಎಲ್ಲ ನಿಗಮಗಳು ನಷ್ಟದಲ್ಲಿದ್ದರೂ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ಇದನ್ನು ಸೇವಾ ಮನೋಭಾವನೆ ಎಂದು ನಾವು ಪರಿಗಣಿಸಿದ್ದೇವೆ ಎಂದರು.

ಹೀಗಾಗಿ ಪ್ರಯಾಣಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳನ್ನು ವಿಲೀನಗೊಳಿಸಬೇಕೆಂದು ಹಿರಿಯ ಅಕಾರಿ ಶ್ರೀನಿವಾಸ್‍ಮೂರ್ತಿ ನೇತೃತ್ವದ ಸಮಿತಿಯು ವರದಿಯನ್ನು ಸಲ್ಲಿಸಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳ ಚರ್ಚಿಸಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಶ್ರೀರಾಮುಲು ಹೇಳಿದರು.

Articles You Might Like

Share This Article