SSC ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿದ್ದರೆ ಹೋರಾಟ

Social Share

ಬೆಂಗಳೂರು, ಅ.29- ಪೇದೆ ಆಯ್ಕೆಗೆ ಅರ್ಜಿ ಆಹ್ವಾನಿಸಿರುವ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್‍ಎಸ್‍ಸಿ) ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಕೂಡಲೇ ಈ ಕನ್ನಡ ವಿರೋಧಿ ಆದೇಶ ಹಿಂಪಡೆದು, ಹೊಸ ಆದೇಶ ಹೊರಡಿಸಿ ಕನ್ನಡವೂ ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಆದೇಶ ಹಿಂಪಡೆಯದಿದ್ದರೆ, ಬೀದಿಗಿಳಿದು ಕನ್ನಡಿಗರ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರ. ಕನ್ನಡದ ಕತ್ತು ಹಿಚುಕುವುದನ್ನೇ ನಿತ್ಯ ಕಾಯಕ ಮಾಡಿ ಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಆಡಳಿತಾವಯಲ್ಲಿ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಮುಗಿಸಲೇಬೇಕು ಎನ್ನುವ ಹಪಾಹಪಿ, ತವಕ, ಹಠ ಉತ್ಕಟವಾಗಿದೆ ಎನ್ನುವುದಕ್ಕೆ ಇದೆ ಹೊಸ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರಿ ಕೆಲಸ ಕನ್ನಡಿಗರ ಹಕ್ಕು. ಪೇದೆ ಆಯ್ಕೆಗೆ ಅರ್ಜಿ ಕರೆದಿರುವ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗವು ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದರೆ, ಕನ್ನಡವೂ ಸೇರಿ ಇತರೆ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಅಭ್ಯರ್ಥಿಗಳು ಏನು ಮಾಡಬೇಕು? ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ.ಇದೆಂಥಾ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಗಡಿ ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಪಡೆ, ಕೇಂದ್ರ ಪೊಲೀಸ್ ಮೀಸಲು ಪಡೆ, ಇಂಡೋ ಟಿಬೆಟಿಯನ್ ಗಡಿ ಪೊಲೀಸ್, ಸಶಸ್ತ್ರ ಸೀಮಾಬಲ, ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸï, ಮಾದಕ ವಸ್ತು ನಿಯಂತ್ರಣಾ ಇಲಾಖೆ ಸೇರಿ ಹಲವು ವಿಭಾಗಗಳಿಗೆ ಪೇದೆಗಳ ಆಯ್ಕೆಗೆ ಜನವರಿಯಲ್ಲಿ ಪರೀಕ್ಷೆ ನಡೆಯಲಿದೆ.

ಈ ಪರೀಕ್ಷೆ ಕೇವಲ ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಇರುತ್ತದೆ. ಅಲ್ಲಿಗೆ ಹಿಂದಿ ಭಾಷಿಕರು ಬಿಟ್ಟರೆ ಬೇರೆ ಯಾರೂ ಆಯ್ಕೆ ಆಗಲೇಬಾರದು ಎನ್ನುವ ಹುನ್ನಾರ ಇದರಲ್ಲಿ ಅಡಗಿದೆ. ನನ್ನ ಅಭಿಪ್ರಾಯದಲ್ಲಿ, ಇದು ಕನ್ನಡ ವಿರೋಧಿ ಅಷ್ಟೇ ಅಲ್ಲ, ಭಾರತವನ್ನು ಉತ್ತರ, ದಕ್ಷಿಣ ಎಂದು ವಿಭಜಿಸಲು ಕೇಂದ್ರ ಬಿಜೆಪಿ ಸರ್ಕಾರವೇ ಕೊಡುತ್ತಿರುವ ಕುಮ್ಮಕ್ಕು ಎಂದು ಆರೋಪಿಸಿದ್ದಾರೆ.

ಸರ್ಕಾರ ಈ ಅಪಾಯದ ಅರಿವು ಅರಿತು ಕೂಡಲೇ ಹೊಸ ಆದೇಶ ಹೊರಡಿಸಿ ಕನ್ನಡವೂ ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕೋಟಿ ಕಂಠ ಗಾಯನ ಎಂದರೆ ಕೋಟಿಗೂ ಹೆಚ್ಚು ಕನ್ನಡ ಕಂಠಗಳಿಗೆ ಜೀವ ತುಂಬುವುದು. ಅನ್ನದ ದಾರಿ ತೋರಿಸುವುದು, ಬದುಕಿನ ಖಾತರಿ ಕೊಡುವುದು. ಕೇವಲ ನಾಲಿಗೆ ಮೇಲೆ ಕನ್ನಡ ಎಂದು ಹೇಳಿ, ಮನದಾಳದಲ್ಲಿ ಅದೇ ಕನ್ನಡದ ಮೇಲೆ ವಿಷ ಕಕ್ಕುವುದಲ್ಲ. ಅದನ್ನು ಕನ್ನಡಿಗರು ಎಂದಿಗೂ ಸಹಿಸುವುದೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಿ ಅಧಿಕಾರಿ ಬಳಿ ಕ್ರಿಪ್ಟೋ ಕರೆನ್ಸಿ ಪತ್ತೆ

ನಿನ್ನೆಯಷ್ಟೇ ಕೋಟಿ ಕಂಠ ಗಾಯನ ಕಾರ್ಯಕ್ರಮ ಮಾಡಿದ ರಾಜ್ಯ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಏನು ಹೇಳುತ್ತದೆ? ಕೋಟಿ ಕಂಠ ಗಾಯನ ಎನ್ನುತ್ತಲೇ ಕನ್ನಡದ ಕತ್ತು ಸೀಳುವುದಾ? ಕನ್ನಡಿಗರ ಅನ್ನ ಕಸಿದುಕೊಳ್ಳುವುದಾ? ಕನ್ನಡಿಗರ ಹಕ್ಕುಗಳಿಗೆ ಮರಣಶಾಸನ ಬರೆಯುವುದಾ? ಕನ್ನಡಿಗರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Articles You Might Like

Share This Article