SSLCಗೆ 2019-20ನೇ ಸಾಲಿನ ಸ್ವರೂಪದ ಪ್ರಶ್ನೆ ಪತ್ರಿಕೆ ಮುಂದುವರಿಕೆ

Social Share


ಬೆಂಗಳೂರು, ಜು.16- 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಪ್ರಸಕ್ತ 2022-23ನೇ ಸಾಲಿನಿಂದ ಅದೇ ವರ್ಗೀಕರಣದಂತೆ ಯಥಾ ರೀತಿ ಮುಂದುವರೆಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಶಾಲೆಗಳು ಭೌತಿಕವಾಗಿ 2 ರಿಂದ 3 ತಿಂಗಳು ವಿಳಂಬವಾಗಿ ಪ್ರಾರಂಭವಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೇ. 20ರಷ್ಟು ಪಠ್ಯವಸ್ತುವನ್ನು ಕಡಿತಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿದ್ದಂತೆಯೇ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಬದಲಾವಣೆ ಮಾಡದೇ, ಪ್ರಶ್ನೆಪತ್ರಿಕೆಯ ಕಠಿಣತೆಯ ಮಟ್ಟವನ್ನು ಸುಲಭ ಪ್ರಶ್ನೆಗಳು ಶೇ.40/ಸಾಧಾರಣ ಪ್ರಶ್ನೆಗಳು ಶೇ.50/ಕಠಿಣ ಪ್ರಶ್ನೆಗಳು ಶೇ.10ರಂತೆ ವಿಂಗಡಿಸಲಾಗಿತ್ತು.

2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅಲ್ಪ ಬದಲಾವಣೆ ಮಾಡಿ, ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ. ಅದರಂತೆ ಸುಲಭ ಪಶ್ನೆಗಳು ಶೇ.30/ಸಾಧಾರಣ ಪ್ರಶ್ನೆಗಳು, ಶೇ.50/ಕಠಿಣ ಪ್ರಶ್ನೆಗಳು ಶೇ.20ರಂತೆ ವಿಂಗಡಿಸಲಾಗಿತ್ತು.

ಇದೀಗ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಅದೇ ರೀತಿ ಮುಂದಿನ ಶೈಕ್ಷಣಿಕ ವರ್ಷದಿಂದ ಮುಂದುವರಿಸಲು ನಿರ್ಧರಿಸಲಾಗಿದೆ.

Articles You Might Like

Share This Article