Sunday, November 2, 2025
Homeರಾಜ್ಯಬೆಳಗಾವಿಯಲ್ಲಿ ರಾಜ್ಯೋತ್ಸವ ಸಂಭ್ರಮದಲ್ಲಿ ಚಾಕು ಇರಿತ : ಕನ್ನಡಿಗರ ಆಕ್ರೋಶ

ಬೆಳಗಾವಿಯಲ್ಲಿ ರಾಜ್ಯೋತ್ಸವ ಸಂಭ್ರಮದಲ್ಲಿ ಚಾಕು ಇರಿತ : ಕನ್ನಡಿಗರ ಆಕ್ರೋಶ

Stabbing during Rajyotsava celebrations: Outrage among Kannadigas

ಬೆಂಗಳೂರು,ನ.2- ಬೆಳಗಾವಿಯಲ್ಲಿ ಅದ್ಧೂರಿ ಯಾಗಿ ನಡೆದ ರಾಜ್ಯೋತ್ಸವದ ಸಂದರ್ಭದಲ್ಲಿ ದುಷ್ಕರ್ಮಿಗಳು ಐದಾರು ಮಂದಿಗೆ ಚಾಕು ಇರಿದು ಅಟ್ಟಹಾಸ ಮೆರೆದಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ನಾಡಿನ ಕನ್ನಡಪರ ಸಂಘಟನೆಗಳು, ನಾಡವಿರೋಧಿ ಧೋರಣೆಯ ಎಂಇಎಸ್‌‍ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿವೆ.

ಎಂಇಎಸ್‌‍ ಪುಂಡಾಟಕ್ಕೆ ತಿಲಾಂಜಲಿ ಹಾಡಲು ರಾಜ್ಯಸರ್ಕಾರ ಕೂಡಲೇ ಮುಂದಾಗಬೇಕು. ಇಲ್ಲ ದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹಾಗೂ ಸಾ.ರಾ.ಗೋವಿಂದು, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್‌ಕುಮಾರ್‌ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರಾಜ್ಯ ದ್ರೋಹಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಎಂಇಎಸ್‌‍ ಪುಂಡರನ್ನು ಸುಮನೆ ಬಿಡಬಾರದು. ಕಠಿಣ ಕ್ರಮ ಕೈಗೊಂಡು ಎಂಇಎಸ್‌‍ಅನ್ನೇ ರಾಜ್ಯದಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವ ಹುನ್ನಾರ ನಡೆಸಿ ಪೊಲೀಸರ ಅನುಮತಿ ಪಡೆಯದೆ ಕರಾಳ ದಿನ ಆಚರಿಸಿದ್ದಾರೆ. ಇವರಿಗೆ ಕಾನೂನಿನ ಭಯವಿಲ್ಲ. ಕನ್ನಡಿಗರನ್ನು ಕೆರಳಿಸುವ ಕೃತ್ಯ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

- Advertisement -

ಬೆಳಗಾವಿಯಲ್ಲಿ ಕನ್ನಡಿಗರ ಅದ್ಧೂರಿ ರಾಜ್ಯೋತ್ಸವವನ್ನು ಸಹಿಸದೆ ಎಂಇಎಸ್‌‍ ದುಷ್ಕರ್ಮಿಗಳು ಪೂರ್ವ ನಿಯೋಜನೆಯಂತೆ ಈ ಕೃತ್ಯ ನಡೆಸಿದ್ದಾರೆ. ಇದನ್ನು ಪೊಲೀಸರು ಲಘುವಾಗಿ ಪರಿಗಣಿಸಬಾರದು. ಬೆಳಗಾವಿ ಕನ್ನಡಿಗರ ಪರ ನಾವಿದ್ದೇವೆ. ಯಾವುದೇ ಮುಲಾಜಿಲ್ಲದೆ ಎಂಇಎಸ್‌‍ ಪುಂಡರನ್ನು ಸದೆಬಡಿಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಮ ತಾಳೆಗೂ ಒಂದು ಮಿತಿ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು ಎಂಇಎಸ್‌‍ ಬಾಲ ಬಿಚ್ಚಿದೆ. ಇದರ ವಿರುದ್ಧ ಕನ್ನಡಿಗರು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಂಇಎಸ್‌‍ನವರು ಕನ್ನಡಿಗರೇ ಅವರನ್ನು ತಿದ್ದುವ ಕೆಲಸ ಮಾಡಬೇಕೆಂದು ಹೇಳುತ್ತಾರೆ. ಆದರೆ ರಾಜ್ಯೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ಕರಾಳ ದಿನಾಚರಣೆ ಮಾಡುವುದಲ್ಲದೆ ದುಷ್ಕರ್ಮಿಗಳು ಚಾಕು ಇರಿಯುವುದರ ಮೂಲಕ ಆತಂಕದ ವಾತಾವರಣ ಸೃಷ್ಟಿಸುತ್ತಾರೆ. ಇಂತಹ ಘಟನೆಗಳಿಗೆ ಇತಿಶ್ರೀ ಹಾಡದಿದ್ದರೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಚಾಕು ಇರಿತದಿಂದ ಗಾಯಗೊಂಡು ಬೀಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಲ್ಲರೂ ಬಿಡುಗಡೆಯಾಗಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಈ ಕೃತ್ಯ ನಡೆದಿರುವುದರಿಂದ ದುಷ್ಕಮಿಗಳ ಪತ್ತೆ ಸವಾಲಾಗಿದೆ. ಅವರನ್ನು ಗುರುತು ಹಿಡಿಯಲು ಈಗ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ನಗರ ಪೊಲೀಸ್‌‍ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟಾರೆ ರಾಜ್ಯೋತ್ಸವದಂದು ನಡೆದಿರುವ ಈ ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಕಿಡಿಗೇಡಿಗಳ ಕೃತ್ಯವನ್ನು ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಖಂಡಿಸಿವೆ.

- Advertisement -
RELATED ARTICLES

Latest News