ನವದೆಹಲಿ,ಜ.2- ಭಾರತೀಯ ರೈಲ್ವೆ ಇಲಾಖೆಯಲ್ಲಿ ಹಲವಾರು ಮೈಲುಗಲ್ಲುಗಳ ಸಾಧನೆಯಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ 2019ರಿಂದಲೂ ಈವರೆಗೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2019-20ನೇ ಸಾಲಿನಲ್ಲಿ 48 ಅಪಘಾತಗಳಾಗಿದ್ದವು. ಆನಂತರ 2020-21ರಲ್ಲಿ 22 ಅಪಘಾತಗಳಾಗಿದ್ದರೂ ಕೂಡ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ.
ಸರಕು ಸಾಗಾಣಿಕೆಯಲ್ಲಿ ರೈಲ್ವೆ ಇಲಾಖೆ ಶೇ.18ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2020-21ರಲ್ಲಿ 870.41 ಮೆಟ್ರಿಕ್ ಟನ್ ಸರಕು ಸಾಗಾಣಿಕೆ ಮಾಡಿದ್ದರೆ, 2021-22ನೇ ಸಾಲಿಗೆ 1029.94 ಮೆಟ್ರಿಕ್ ಟನ್ ಸರಕು ಸಾಗಾಣಿಕೆಯಾಗಿದೆ. ಕಳೆದ ಎಂಟು ತಿಂಗಳಿನಲ್ಲಿ ಅತಿಹೆಚ್ಚು ಸರಕು ಸಾಗಾಣಿಕೆಯಾಗಿದೆ ಎಂದು ತಿಳಿಸಲಾಗಿದೆ.
ಸರಕು ಸಾಗಾಣಿಕೆಯ ವೇಗ ಗಂಟೆಗೆ 42.97 ಕಿ.ಮೀನಿಂದ 44.36 ಕಿ.ಮೀಗೆ ಹೆಚ್ಚಳವಾಗಿದೆ. ರೈಲುಗಳ ಸಮಯ ಪಾಲನೆ ಶೇ.92.55ರಷ್ಟು ಕರಾರುವಕ್ಕಾಗಿದೆ.
ರೈಲ್ವೆ ಮೂಲ ಸೌಲಭ್ಯ ಅಭಿವೃದ್ಧಿಗೆ 2.15 ಲಕ್ಷ ಕೋಟಿ ರೂ. ನೀಡಲಾಗಿದ್ದು, ನವೆಂಬರ್ ವೇಳೆಗೆ 1.04 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ. 1924 ಕಿ.ಮೀ ವಿದ್ಯುದ್ದೀಕರಣಗೊಳಿಸಲಾಗಿದೆ. 1330 ಕಿ.ಮೀ ದ್ವಿಪಥ ಕಾಮಗಾರಿ ಪೂರ್ಣಗೊಂಡಿದೆ. 83 ಮೇಲ್ಸೇತುವೆ, ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ.
ಕಳೆದ ಆಗಸ್ಟ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ರೈಲಿಗೆ ಚಾಲನೆ ನೀಡಿದರು. 153 ಮಾರ್ಗಗಳಲ್ಲಿ 1906 ಕಿಸಾನ್ ರೈಲುಗಳು ಸಂಚಾರ ಮಾಡಿದ್ದು 5.9 ಲಕ್ಷ ಟನ್ ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ಮಾಡಿವೆ.
ದೇಶದ 840 ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. 6089 ನಿಲ್ದಾಣಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಪೂರೈಕೆ ಸೇರಿದಂತೆ ಮಹತ್ವದ ಸೇವೆಗೆ ಇಲಾಖೆ ಸಾಕ್ಷಿಯಾಗಿದೆ ಎಂದು ರೈಲ್ವೆ ಇಲಾಖೆ ತನ್ನ ವಾರ್ಷಿಕ ಪ್ರಗತಿಯ ಮಾಹಿತಿ ನೀಡಿದೆ.
