ಸ್ಯಾಂಡಲ್‍ವುಡ್‍ನಲ್ಲಿ ಮೇರು ತಾರೆಗಳ ಹುಟ್ಟಹಬ್ಬದ ಸಂಭ್ರಮ

Spread the love

ಬೆಂಗಳೂರು,ಸೆ.18-ಸ್ಯಾಂಡಲ್‍ವುಡ್‍ನಲ್ಲಿ ಇಂದು ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಶೃತಿ ಅವರ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸಿನಿ ತಾರೆಯರ ಹುಟ್ಟುಹಬ್ಬಕ್ಕೆ ಕನ್ನಡ ಚಿತ್ರರಂಗದಲ್ಲಿನ ಅಭಿಮಾನಿ ಬಳಗ, ಕುಟುಂಬಸ್ಥರು, ಆತ್ಮೀಯರು ಶುಭಾಷಯ ಕೋರಿದ್ದಾರೆ.

ವಿಷ್ಣವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬ ವಿಶಿಷ್ಟತೆ ಪಡೆದುಕೊಂಡಿದೆ. ಕಾರಣ ಅವರ ಸ್ಮಾರಕ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ದೂರಾಗಿ ಕಳೆದ ಸೆ.15ರಂದು ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಷ್ಣು ಸ್ಮಾರಕಕ್ಕೆ ಮುಖ್ಯಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಭಾರತ ಸರ್ಕಾರದ ಅಂಚೆ ಇಲಾಖೆಯಿಂದ ವಿಷ್ಣುವರ್ಧನ್ ಅವರ 70ನೇ ಜಯಂತ್ಯುತ್ಸವದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳ್ಳುತ್ತಿದೆ. ಇಂದು ಮಧ್ಯಾಹ್ನ ವಿಧಾನಸೌಧ ಬಳಿಯ ಕೇಂದ್ರ ಅಂಚೆಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಅಂಚೆ ಲಕೋಟೆ ಲೋಕಾರ್ಪಣೆಗೊಳ್ಳುತ್ತಿದೆ.  ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಸ್ಟುಡಿಯೋದಲ್ಲಿ ಅಭಿಮಾನಿಗಳಿಂದ ಪೂಜೆ ಮತ್ತಿತರ ಕಾರ್ಯಕ್ರಮಗಳು ನೆರವೇರುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿರುವುದಲ್ಲದೆ ಮನೆ ಹತ್ತಿರ ಯಾರೂ ಬರಬೇಡಿ ಎಂದು ಮನವಿ ಮಾಡಿದ್ದಾರೆ.  ಹಾಗಾಗಿ ಅಭಿಮಾನಿಗಳ ದಂಡೇನೂ ಮನೆ ಬಳಿ ನೆರೆದಿಲ್ಲ. ಆದರೆ ಕುಟುಂಬಸ್ಥರು ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದು, ಆತ್ಮೀಯರು, ಚಿತ್ರರಂಗದವರು ಉಪ್ಪಿಗೆ ಶುಭಾಶಯ ಕೋರಿದ್ದಾರೆ.

53ನೇ ವರ್ಷಕ್ಕೆ ಕಾಲಿಡುತ್ತಿರುವ ಉಪ್ಪಿ ನಟಿಸುತ್ತಿರುವ ಬಹುಕೋಟಿ ನಿರ್ಮಾಣದ ಕಬ್ಜ ಚಿತ್ರದ ಥೀಮ್ ಪೋಸ್ಟರ್ ಇಂದು ಜನ್ಮದ ದಿನದ ಅಂಗವಾಗಿ ಬಿಡುಗಡೆಗೊಳ್ಳುತ್ತಿದೆ. ಆರ್.ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿರುವ ಈ ಚಿತ್ರ ಇದಾಗಿದೆ. ಸಿನಿಮಾ ಕ್ಷೇತ್ರದಲ್ಲಿ ವಿಶಿಷ್ಟ ಮಾನ್ಯರಿಸಂನಿಂದ ಹೆಸರು ಗಳಿಸಿರುವ ಉಪ್ಪಿ ರಾಜಕೀಯದ ಕಡೆಗೂ ಆಸಕ್ತಿ ವಹಿಸಿ ಪ್ರಜಾಕಿಯ ಎಂಬ ಪಕ್ಷ ಕಟ್ಟಿ ಸಕ್ರಿಯರಾಗಿದ್ದಾರೆ.

2021 ಎಂಬ ಶೀರ್ಷಿಕೆಯಡಿ ನೂರು ಕೋಟಿ ವೆಚ್ಚದ ಅದ್ಧೂರಿ ಚಿತ್ರ ಇವರ ಮುಂದಿನ ಚಿತ್ರವಾಗಿದ್ದು, ಇದರ ನಿರ್ದೇಶನವನ್ನು ಮಂಜು ಮಾಂಡವ್ಯ ಮಾಡುತ್ತಿದ್ದರೆ, ಅಣ್ಣಯ್ಯ ಚಂದ್ರ ಏಳು ಭಾಷೆಗಳಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.

ಸಹಜ ಅಭಿನಯದ ನಾಯಕಿ ಎಂದೇ ಖ್ಯಾತರಾದ ಶೃತಿ ಚತುರ್ಭಾಷಾ ನಟಿ. ಹಲವಾರು ಚಿತ್ರಗಳಲ್ಲಿ ಮಹಿಳೆಯರ ಮನಸೆಳೆಯುವ ಪಾತ್ರ ನಿರ್ವಹಿಸಿ ನೆಚ್ಚಿನ ನಟಿಯಾಗಿ ಮಿಂಚಿದವರು. ಪ್ರಸ್ತುತ ಬಿಜೆಪಿಯಲ್ಲಿ ಸಕ್ರಿಯರಾಗಿರುವ ಶೃತಿ ಅವರಿಗೆ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಜನ್ಮ ದಿನದ ಶುಭಾಶಯ ಕೋರಿದ್ದಾರೆ.

Facebook Comments