ಶಾಲೆಗಳ ಆರಂಭಕ್ಕೆ ರುಪ್ಸ ಒತ್ತಾಯ

ಬೆಂಗಳೂರು,ಆ.2- ಕಳೆದ 16 ತಿಂಗಳಿನಿಂದ ಭೌತಿಕ ತರಗತಿಗಳು ನಡೆಯದೆ ಸುಮಾರು 40 ಲಕ್ಷ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಸರ್ಕಾರ ಕೂಡಲೇ ಶಾಲೆಗಳನ್ನು ಆರಂಭಿಸಬೇಕೆಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸ) ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು, ಭೌತಿಕ ತರಗತಿಗಳನ್ನು ಪ್ರಾರಂಭಿಸಲು ವಿದ್ಯಾಗಮ, ಪಾಳಿ ಪದ್ದತಿ ಮುಂತಾದ ವಿಧಾನಗಳಿಂದ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಕರೆತಂದು ಅವರ ಕಲಿಕೆಯನ್ನು ಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಬಳಿ ಮೊಬೈಲ್, ನೆಟ್‍ವರ್ಕ್ ಇಲ್ಲದೆ ಕಲಿಕೆಯಲ್ಲಿ ನಿರಂತವಾಗಿ ಕುಂಠಿತವಾಗಿದೆ. ರಾಜ್ಯಾದಲ್ಲಿ ಸಾವಿರಾರು ಬಾಲ್ಯ ವಿವಾಹಗಳಾಗಿವೆ. ಲಕ್ಷಾಂತರ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಮಕ್ಕಳಲ್ಲಿ ಅಪೌಷ್ಠಿಕತೆಯು ಕಳೆದ ಒಂದು ವರ್ಷದಿಂದ ಹೆಚ್ಚಾಗಿದೆ. ಮಕ್ಕಳು ಶಾಲೆಗೆ ದಾಖಲಾಗದೆ ಹೊರಗುಳಿದರೆ ಮುಂದಿನ ದಿನಗಳಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುವ ಸಾಧ್ಯತೆ ಇದೆ.

ನಮ್ಮ ಸಂಘದ ವತಿಯಿಂದ ಹಲವಾರು ಬಾರಿ ಮನವಿ ಮಾಡಿದರೂ ಶಾಲೆಗಳ ಪ್ರಾರಂಭದ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ. ವಿದ್ಯಾಗಮ ಮತ್ತಿತರೆ ಯಾವುದೇ ವಿಧಾನಗಳ ಮೂಲಕ ಭೌತಿಕ ತರಗತಿಗಳನ್ನು ಸರ್ಕಾರ ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಡಾ.ದೇವಿಶೆಟ್ಟಿ ಅವರ ನೇತೃತ್ವದ ಸಮಿತಿ ಲಾನ್ಸೆಟ್ ಸಂಸ್ಥೆಯ ವರದಿ, ನಿಮ್ಹಾನ್ಸ್ ತಜ್ಞರ ನಿರ್ದೇಶನ, ಐಸಿಎಂಆರ್ ತಜ್ಞರು ಶಾಲೆಗಳನ್ನು ಪ್ರಾರಂಭಿಸಲು ವರದಿಗಳನ್ನು ನೀಡಿದ್ದರು. ಆದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಇರುವುದು ವಿಷಾದನೀಯ ಎಂದು ಹೇಳಿರುವ ಅವರು, ಕೂಡಲೇ ಸರ್ಕಾರ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದ್ದಾರೆ.