ಫೆ. 10ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ..? ಸಿಎಂ ಬೊಮ್ಮಾಯಿ ತಯಾರಿ

Social Share

ಬೆಂಗಳೂರು,ನ.4-ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಕೊನೆಯ ಬಜೆಟ್‍ನ್ನು 2023ರ ಫೆಬ್ರವರಿ ತಿಂಗಳಿನಲ್ಲಿ ಮಂಡಿಸಲಿದ್ದಾರೆ.

ಬಜೆಟ್ ಮಂಡನೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ಕಳೆದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳು ಹಾಗೂ ಅದರ ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಮೂಲಗಳ ಪ್ರಕಾರ ಫೆಬ್ರವರಿ 10ರಂದು ಬಜೆಟ್ ಮಂಡನೆ ಮಾಡುವ ಸಾಧ್ಯತೆಯಿದ್ದು, ಫೆ.26ರವರೆಗೆ ಬಜೆಟ್ ಮೇಲೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.ಚುನಾವಣಾ ವರ್ಷವಾಗಿರುವುದರಿಂದ ಈ ಬಾರಿಯ ಬಜೆಟ್‍ನಲ್ಲಿ ಜನಪ್ರಿಯ ಘೋಷಣೆ ಜೊತೆಗೆ ಆರ್ಥಿಕ ಶಿಸ್ತು, ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಯೋಜನೆಗಳು, ಮತದಾರರನ್ನು ಆಕರ್ಷಿಸುವ ಬಜೆಟ್ ಇದಾಗಲಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ ತಿಂಗಳಲ್ಲಿ ನಡೆಯುವ ವಿಧಾನ ಮಂಡಲದ ಜಂಟಿ ಅವೇಶನದ ಬಳಿಕ ಮುಖ್ಯಮಂತ್ರಿಗಳು ಬಜೆಟ್ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

2023ರ ಚುನಾವಣೆಯ ದೃಷ್ಟಿಯಿಂದಲೂ ಈ ಬಜೆಟ್ ಕುತೂಹಲ ಮೂಡಿಸಿದೆ. ಬೊಮ್ಮಾಯಿ ಅವರು, ತಮ್ಮ ಬಜೆಟ್‍ನಲ್ಲಿ 5 ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಕೃಷಿ, ರೈತರ ಕಲ್ಯಾಣ ಮತ್ತು ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸುವ ಸಾಧ್ಯತೆ ಇದೆ.

2023ರ ವಿಧಾನಸಭಾ ಚುನಾವಣೆ ಮೊದಲು, ಬಿಬಿಎಂಪಿ ಚುನಾವಣೆ ಇದೆ ವರ್ಷ ನಡೆಯಲಿದೆ. ಬಜೆಟ್ ನಂತರ ಬರುವ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಕಾರ್ಯಕ್ಕೆ ಅನಿವಾರ್ಯವಾಗಿ ಹೆಚ್ವಿನ ಹಣ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಧಾನಸಭೆ ಚುನಾವಣೆ ಕೂಡ ಹತ್ತಿರದಲ್ಲೇ ಇದ್ದು, ಮತದಾರರನ್ನು ಸೆಳೆಯರು ಜನಪ್ರಿಯ ಕಾರ್ಯಕ್ರಮ, ಯೋಜನೆಗಳ ಘೋಷಣೆ ಮಾಡುವುದು ಮುಖ್ಯಮಂತ್ರಿಗಳಿಗೆ ಅನಿವಾರ್ಯವಾಗಿದೆ. ಉಳಿದಂತೆ ಸಾಮಾನ್ಯಜನರ ಜೇಬಿಗೆ ಪರೋಕ್ಷವಾಗಿ ಕತ್ತರಿ ಹಾಕುವ ಯಾವುದೇ ತೆರಿಗೆಗಳನ್ನು ಹೆಚ್ಚಿಸುವ ಗೋಜಿಗೆ ಹೋಗುವ ಸಂಭವ ಕಡಿಮೆ ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಬೊಮ್ಮಾಯಿ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚು ಹಿಡಿತ ಸಾಸಿದ್ದಾರೆ. ನೀರಾವರಿ ಯೋಜನೆಗಳಿಂದ ರೈತಾಪಿ ಕುಟುಂಬಗಳನ್ನ ಸೆಳೆಯಲು ಸುಲಭ ಎಂಬ ಲೆಕ್ಕಾಚಾರ ಆಗಿದೆ.

ಈ ಕಾರಣಕ್ಕೆ ಅಭಿವೃದ್ಧಿ ಕೆಲಸಕ್ಕೆ ಮೀಸಲಿಡುವ ಹಣಕಾಸಿನಲ್ಲಿ ನೀರಾವರಿ ಯೋಜನೆಗೆ ಸಿಂಹಪಾಲು ಎನ್ನಲಾಗಿದೆ. ಇದರ ಜತೆಗೆ ಕಾಂಗ್ರೆಸ್ ನೀರಾವರಿ ಯೋಜನೆಗಳಿಗೆ ಪಾದಯಾತ್ರೆಗೆ ಕೌಂಟರ್ ಕೊಡಲು ಸರಣಿ ನೀರಾವರಿ ಘೋಷಣೆಗಳ ಜೊತೆಗೆ ನೀರಾವರಿ ಇಲಾಖೆಯಲ್ಲಿ ಒಂದು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ರಾಜ್ಯದ ಜಿಡಿಪಿ ಸದ್ಯ 17 ಲಕ್ಷ ಕೋಟಿ ಇದೆ. 2025 ಅಷ್ಟರಲ್ಲಿ ರಾಜ್ಯದ ಜಿಡಿಪಿ ದುಪ್ಪಟ್ಟು ಆಗಬೇಕು. ಜಿಡಿಪಿ 34 ಲಕ್ಷ ಕೋಟಿ ಮಾಡುವ ಪೂರಕ ನೀತಿಯನ್ನ ರೂಪಿಸುವಂತೆ ಸಲಹೆ ನೀಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಗು ಎತ್ತಿಕೊಂಡು ಭಾಷಣ ಮಾಡಿದ ಜಿಲ್ಲಾಧಿಕಾರಿ ಬಗ್ಗೆ ಪರ-ವಿರೋಧ ಚರ್ಚೆ

ಉತ್ಪಾದನಾ ವಲಯ, ಕೃಷಿ ವಲಯ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಅನುದಾನ ನೀಡಲು ಚಿಂತನೆ ನಡೆಸಿದ್ದಾರೆ. ಕೃಷಿ ವಲಯಗಳಲ್ಲಿ ಜಿಡಿಪಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ಯೋಜನೆಗಳನ್ನು ರೂಪಿಸಲು ಸಜ್ಜಾಗುತ್ತಿದ್ದಾರೆ.

ಒಟ್ಟಿನಲ್ಲಿ ಮುಳ್ಳಿನ ಹಾದಿಯಾಗಿರುವ 2022-23 ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿ ಹೇಗೆ ನಡೆಯುತ್ತಾರೆ ಎಂಬ ಪ್ರಶ್ನೆ ಬಿಜೆಪಿಗೆ ಎದುರಾಗಿದೆ. ಬೊಮ್ಮಾಯಿ ಅವರಿಗೆ ಸವಾಲಾಗಿರುವ ಈ ಬಜೆಟ್‍ನಲ್ಲಿ ಎಲ್ಲಾ ವರ್ಗದ ಜನರಿಗೆ ಯೋಜನೆಗಳನ್ನು ನೀಡುತ್ತಾರಾ? ಸರ್ವಸ್ಪರ್ಶಿ ಬಜೆಟ್ ನೀಡಲು ಸಾದ್ಯವೇ? ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಸುಧಾರಣಾ ಬಜೆಟ್ ನೀಡುತ್ತಾರ? ಈ ರೀತಿ ಸರಣಿ ಪ್ರಶ್ನೆಗಳು ಬೊಮ್ಮಾಯಿ ಬಜೆಟ್ ಸುತ್ತ ಬೆಳೆದಿದೆ, ಇವೆಲ್ಲಾ ಪ್ರಶ್ನೆಗಳಿಗೆ ಆಯವ್ಯಯದಲ್ಲಿ ಉತ್ತರ ಸಿಗಲಿದೆ.

Articles You Might Like

Share This Article