ಬೆಂಗಳೂರು, ಫೆ.16- ರಾಜ್ಯದ ಜನತೆ ಕಾತರದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಪ್ರಸಕ್ತ 2023- 24 ನೇ ಸಾಲಿನ ಬಜೆಟ್ ಅನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ನಾಳೆ ಮಂಡನೆ ಮಾಡಲಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಭರಪೂರ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಬೆಳಗ್ಗೆ 10.15ಕ್ಕೆ ಸರಿಯಾಗಿ ವಿಧಾನಸಭೆಯಲ್ಲಿ ಬೊಮ್ಮಯಿ ಅವರು ಈ ಬಾರಿ ಯುವಕರು, ದುಡಿಯುವ ವರ್ಗ, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಕ್ಕೆ ಬಂಪರ್ ಕೊಡುಗೆ ನೀಡಲಿದ್ದಾರೆ ಎನ್ನಲಾಗಿದೆ.
ಕೋವಿಡ್ ಮತ್ತು ಪ್ರವಾಹದ ಕಾರಣದಿಂದಾಗಿ ಸಂಕಷ್ಟ ಎದುರಿಸುತ್ತಿರುವ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣು ಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಿಸಲು ಅಗತ್ಯ ಇರುವ ಆರ್ಥಿಕ ನೆರವು ನೀಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸುವ ಸಂಭವ ಹೆಚ್ಚಾಗಿದೆ.
ದಶಕಗಳಿಂದ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದು, ರೈತಾಪಿ ಸಮುದಾಯವ ಮನಗೆಲ್ಲಲು ನೀರಾವರಿ ಯೋಜನೆಗಳಿಗೆ ಭರಪೂರ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ.
ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಅನುದಾನ ಮಂಜೂರಾತಿ ಮೂಲಕ ಆ ಭಾಗದ ಜನರ ಸೆಳೆಯಲಾಗುತ್ತದೆ.
ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗವನ್ನೂ ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಮಾಡಿದ್ದು, ಬಜೆಟ್ ನಲ್ಲಿಯೂ ಹಳೆ ಮೈಸೂರು ಭಾಗಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಹಂಪಿ, ಮೈಸೂರು ಟೂರಿಸಂ ಕ್ಲಸ್ಟರ್, ಪಟ್ಟದಕಲ್ಲು ಪ್ರವಾಸಿ ಪ್ಲಾಜ ನಿರ್ಮಾಣ, ಘಟಪ್ರಭಾ ನದಿ ಹಿನ್ನೀರಿನಲ್ಲಿ ಜಲಸಾರಿಗೆ ಯೋಜನೆಗೆ ಅನುದಾನ,ಆಲಮಟ್ಟಿ ಡ್ಯಾಂ ಎತ್ತರ, ಕೃಷ್ಣಾ ರಾಷ್ಟ್ರೀಯ ಯೋಜನೆ ಘೋಷಣೆ, ಪುನರ್ವಸತಿ ಹಾಗೂ ಪುನರ್ನಿರ್ಮಾಣ ಕಾರ್ಯಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಸಾಧ್ಯತೆ ಇದೆ.
ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 25 ಸಾವಿರ ಹುದ್ದೆ ಭರ್ತಿ ಮಾಡುವ ಘೋಷಣೆ, ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ, ಪ್ರವಾಸೋದ್ಯಮ, ಬಿದರಿ ಕಲೆಗೆ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈಸೂರು, ಚಿಕ್ಕಮಗಳೂರು ಭಾಗದ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಂತೆ ಟೂರಿಸಂ ಸರ್ಕೀಟ್‍ಗೆ ಅನುದಾನ ನೀಡುವುದು, ವಿಶ್ವವಿಖ್ಯಾತ ದಸರಾ ಆಚರಣೆಗಾಗಿ ಪ್ರತ್ಯೇಕ ದಸರಾ ಪ್ರಾಕಾರ ರಚಿಸಿ ಅನುದಾನ ಬಿಡುಗಡೆ, ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಬೆಂಗಳೂರು ನಂತರ ಅತಿದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೆÇೀಟಿ ಇದ್ದು, ಇಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿ ಹಾಗೂ ಹೆಚ್ಚಿನ ಅನುದಾನ ಪ್ರಕಟಿಸಿ ಜಿಲ್ಲೆ ಯ ಜನರನ್ನು ಆಕರ್ಷಿಸುವ ಸಾಧ್ಯತೆ ಇದೆ. ಮಹದಾಯಿ ಕಾಮಗಾರಿಗೆ ಹೆಚ್ಚಿನ ಹಣ ಮೀಸಲಿಟ್ಟು ಕಾಮಗಾರಿ ಆರಂಭದ ಘೋಷಣೆ, ಹುಬ್ಬಳ್ಳಿ ಧಾರವಾಡದಲ್ಲಿ ಮೆಟ್ರೋ ಆರಂಭಕ್ಕೆ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಿ ಬಹುಬೇಡಿಕೆಯಂತೆ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಘೋಷಣೆ ಸಂಭವವಿದೆ.
ಮಧ್ಯ ಕರ್ನಾಟಕದ ಹೃದಯ ಭಾಗವಾದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಘೋಷಣೆ, ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಅನುದಾನ, ದಾವಣಗೆರೆ-ಚಿತ್ರದುರ್ಗ – ತುಮಕೂರು ನೇರ ರೈಲ್ವೆ ಮಾರ್ಗದ ಭೂಸ್ವಾೀನಕ್ಕೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಆಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರದಲ್ಲಿ ಅರಳಿರುವ ಕಮಲವನ್ನು ಸದೃಢಗೊಳಿಸಲು ಎತ್ತಿನಹೊಳೆಯಿಂದ ಜಿಲ್ಲೆಗೆ ನೀರು,ಎಚ್‍ಎನ್ ವ್ಯಾಲಿ ನೀರಿನ ಮೂರು ಹಂತದ ಶುದ್ಧೀಕರಣಕ್ಕೆ ಅನುದಾನ ಬಿಡುಗಡೆ, ಕೋಲಾರದಲ್ಲಿ ಚಿನ್ನದ ಗಣಿ ವಿಚಾರದಲ್ಲಿ ಸ್ಪಷ್ಟತೆ ನೀಡುವ ಸಾಧ್ಯತೆ ಇದೆ.
ರಾಮನಗರ ಜಿಲ್ಲೆ ಕಾಂಗ್ರೆಸ್, ಜೆಡಿಎಸ್ ನಡುವಿನ ಜಿದ್ದಾಜಿದ್ದಿ ಪೈಪೋಟಿ ಇರುವ ಜಿಲ್ಲೆ ಯಾಗಿದ್ದು, ಇಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಿದೆ.
ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿ ಬಿಜೆಪಿ ಸರ್ಕಾರ ಬಂದ ನಂತರ ರದ್ದುಗೊಂಡಿದ್ದ ಕನಕಪುರ ವೈದ್ಯಕೀಯ ಕಾಲೇಜು ಮರು ಘೋಷಣೆ ಮಾಡಿ ಬಿಜೆಪಿಗೆ ಬಲ ತುಂಬುವ ನಿರೀಕ್ಷೆ ಇದೆ. ರಾಜೀವ್ ಗಾಂ ಆರೋಗ್ಯ ವಿವಿ ಸ್ಥಾಪನೆಗೂ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ. ಆ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸಲು ಪ್ರಯತ್ನ ನಡೆಸಲಾಗುತ್ತದೆ.
ಬೆಂಗಳೂರಿಗೆ ಬಂಪರ್ ಕೊಡುಗೆ ?
ಬೆಂಗಳೂರು ನಗರಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ, ತುಮಕೂರು ರಸ್ತೆ ಮೇಲ್ಸೇತುವೆ ಸಮಸ್ಯೆಗೆ ಪರಿಹಾರ, ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಯೋಜನೆ, ಕೇಂದ್ರದ ಸಲಹೆಯಂತೆ ಒಂದೇ ಮಾರ್ಗದಲ್ಲಿ ವಾಹನಗಳು, ರೈಲು, ಮೆಟ್ರೋ ಸಂಚಾರಕ್ಕೆ ಯೋಜನೆ ರೂಪಿಸಲು ಅನುದಾನ, ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ, ಮೆಟ್ರೋಗೆ ಭೂಸ್ವಾೀನ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನ, ಮಳೆ ಅನಾಹುತ ತಡೆಗೆ ರಾಜಕಾಲುವೆಗಳ ವ್ಯವಸ್ಥಿತ ನಿರ್ವಹಣೆಗೆ ಅನುದಾನ, ರಸ್ತೆಗುಂಡಿ ಸಮಸ್ಯೆ ತಪ್ಪಿಸಲು ವೈಟ್ ಟಾಪಿಂಗ್ ಯೋಜನೆ ಘೋಷಿಸಿ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ.
ಬಿಜೆಪಿ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಗಾಗಿ ಕೊಡಗಿನ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜï, ಸುಸಜ್ಜಿತ ಕ್ರೀಡಾಂಗಣ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಬಹುದು.
ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ಪೂರಕವಾಗಿ ಈ ಬಾರಿಯ ಬಜೆಟ್ ಇರಲಿದೆ, ನಮ್ಮ ನಮ್ಮ ಕ್ಷೇತ್ರಗಳ ಯೋಜನೆಗಳಿಗೆ ಅನುದಾನ, ಹೊಸ ಯೋಜನೆ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆ ಬಿಜೆಪಿ ಶಾಸಕರz್ದÁಗಿದೆ. ಆದರೆ ಬೊಮ್ಮಾಯಿ ಜೋಳಿಗೆಯಲ್ಲಿ ಯಾರಿಗೆ ಏನು ಸಿಗಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.