ಅಸ್ಸೋಂ, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭ

ಗುವಾಹಟಿ/ಪಶ್ಚಿಮ ಬಂಗಾಳ, ಮಾ.27- ಪಂಚರಾಜ್ಯಗಳ ಚುನಾವಣಾ ಸಮರ ಆರಂಭಗೊಂಡಿದ್ದು, ಇಂದು ಅಸ್ಸೋಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭಗೊಂಡಿದೆ. ಅಸ್ಸೋಂ ವಿಧಾನಸಭೆಯ ಮೊದಲ ಹಂತದಲ್ಲಿ 47 ಸ್ಥಾನಗಳಿಗೆ ಬಿರುಸಿನ ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಸಚಿವರು ಮತ್ತು ವಿರೋಧ ಪಕ್ಷದ ಅತಿಥೇಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

23 ಮಹಿಳೆಯರು ಸೇರಿದಂತೆ ಒಟ್ಟು 264 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಅಸ್ಸೋಂ ಗಣ ಪರಿಷತ್, ಆಮ್ ಆದ್ಮಿ ಸೇರಿದಂತೆ ಪಕ್ಷೇತರರು ಕಣದಲ್ಲಿದ್ದು, ಭಾರೀ ಬಿಗಿ ಭದ್ರತೆಯಲ್ಲಿ ಚುನಾವಣೆ ನಡೆಯುತ್ತಿದೆ. ಇನ್ನು ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, 191 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 73 ಲಕ್ಷಕ್ಕೂ ಹೆಚ್ಚು ಜನರು ಮತದಾನದ ಹಕ್ಕು ಪಡೆದಿದ್ದಾರೆ.

ಸೂಕ್ಷ್ಮ ಪ್ರದೇಶಗಳು ಇದರ ವ್ಯಾಪ್ತಿಯಲ್ಲಿ ಬರಲಿದ್ದು, ಸೇನೆ ಹಾಗೂ ಅರೆಸೇನಾ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವಾದರೂ ಕೆಲವು ಕಡೆ ಮಾತಿನ ಚಕಮಕಿ ನಡೆದಿವೆ. ಹೈ ವೋಲ್ಟೇಜ್ ರಾಜ್ಯವೆಂದೇ ಬಿಂಬಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನೇರಾನೇರಾ ಸ್ಪರ್ಧೆ ಏರ್ಪಟ್ಟಿದ್ದು, ಇಂದಿನ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.

ಎಡರಂಗ ಕಾಂಗ್ರೆಸ್ ಮೈತ್ರಿಕೂಟ ಹಾಗೂ ಆಮ್ ಆದ್ಮಿ ಪಕ್ಷವು ಕೂಡ ಈಗ ಚುನಾವಣಾ ಕಣದಲ್ಲಿದ್ದು, ಬಿಜೆಪಿಗೆ ಠಕ್ಕರ್ ನೀಡಿದೆ. ಶತಾಯ-ಗತಾಯ ತೃಣಮೂಲ ಕಾಂಗ್ರೆಸ್ ಬಗ್ಗುಬಡಿಯುವ ನಿಟ್ಟಿನಲ್ಲಿ ಬಿಜೆಪಿ ರಣತಂತ್ರ ರೂಪಿಸಿದ್ದು, ಗೆಲ್ಲಲೇಬೇಕೆಂಬ ಛಲದೊಂದಿಗೆ ಎರಡೂ ಪಕ್ಷಗಳು ಸಮರಕ್ಕಿಳಿದಿವೆ.