ಮುಂಬೈ, ಫೆ.6- ಇಂದು ಬೆಳಗ್ಗೆ ಇಲ್ಲಿನ ಬ್ರೀಚ್‍ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ.
ಲತಾ ಮಂಗೇಶ್ಕರ್ ಅವರ ಅಗಲಿಕೆ ಒಂದು ವೈಭವದ ಯುಗದ ಅಂತ್ಯವನ್ನು ಸೂಚಿಸುತ್ತದೆ ಎಂದು ಠಾಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲತಾ ಅವರ ಮಧುರ ಧ್ವನಿ ಅಮರ. ಅವರ ನಿಧನ ವಾರ್ತೆ ಕೇಳಿ ಪ್ರತಿಯೊಬ್ಬರೂ ದುಃಖಿತರಾಗಿದ್ದಾರೆ ಎಂದು ಠಾಕ್ರೆ ನುಡಿದಿದ್ದಾರೆ. ಅವರು ಜೀವಂತವಾಗಿಯೇ ಉಳಿಯಲಿದ್ದಾರೆ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಛಾಯಾಗ್ರಾಹಕಿ: ಲತಾ ಅವರು ಓರ್ವ ಉತ್ತಮ ಛಾಯಾಗ್ರಾಹಕಿಯಾಗಿದ್ದರು ಮತ್ತು ಉತ್ತಮ ಕ್ಯಾಮೆರಾಗಳು ಹಾಗೂ ವಿವಿಧ ಲೆನ್ಸ್‍ಗಳ ಬಗ್ಗೆ ತಿಳುವಳಿಕೆ ಹೊಂದಿದ್ದರು. ನಾವು ಆಗಾಗ್ಗೆ ಛಾಯಾಗ್ರಹಣದ ಬಗ್ಗೆ ಚರ್ಚೆ ನಡೆಸುತ್ತಿದ್ದೆವು ಮತ್ತು ನನ್ನ ಫೋಟೋ ಪ್ರದರ್ಶನಗಳಲ್ಲಿ ಪಾಲ್ಗೊಂಡು ನನ್ನನ್ನು ಆಶೀರ್ವದಿಸುತ್ತಿದ್ದರು. ಇತ್ತೀಚೆಗೆ ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಆರೋಗ್ಯವನ್ನು ವಿಚಾರಿಸಿದ್ದರು ಎಂದು ಠಾಕ್ರೆ ಸ್ಮರಿಸಿಕೊಂಡಿದ್ದಾರೆ.
