ಬೆಂಗಳೂರು,ಜು.16- ಕರ್ನಾಟಕದ ಮದರಸಾ ಗಳಲ್ಲಿ ಉರ್ದುವಿನಲ್ಲೇ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಅಲ್ಲಿಯೂ ಕನ್ನಡ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ. ಇನ್ನು ಮುಂದೆ ರಾಜ್ಯದ ಮದರಸಾಗಳಲ್ಲಿ ಕಡ್ಡಾಯ ವಾಗಿ ಕನ್ನಡದಲ್ಲೇ ಬೋಧನೆ ಮಾಡಬೇಕು ಎಂಬ ದಿಸೆಯಲ್ಲಿ ಆದೇಶ ಹೊರಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಈ ಕುರಿತಂತೆ ಕನ್ನಡ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸಾವಿರಾರು ಮದರಸಾಗಳಿದ್ದು, ಮುಸ್ಲಿಂ ವಿದ್ಯಾರ್ಥಿಗಳಿಗೆ ಬೋಧಕರು ಕನ್ನಡದಲ್ಲಿ ಪಾಠ ಮಾಡಲು, ಕನ್ನಡ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆ ರೂಪಿಸಿದೆ. ಕನ್ನಡದಲ್ಲೇ ಪಾಠ ಮಾಡಬೇಕು. ವಾರದಲ್ಲಿ ಕನಿಷ್ಠ 2-3 ಗಂಟೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಬೋಧನೆ ಮಾಡಬೇಕು. ಆ ಮೂಲಕ ಮಕ್ಕಳು ಕನ್ನಡ ಕಲಿಯುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯೋಜನೆ ರೂಪಿಸಿದೆ.
ಹಾಗೊಂದು ವೇಳೆ, ಪ್ರಾಧಿಕಾರವು ಆದೇಶ ಹೊರಡಿಸಿದರೆ, ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಕನ್ನಡ ಕಲಿಯಲಿದ್ದಾರೆ. ಮದರಸಾಗಳಲ್ಲಿ ರಾಮನ ಕುರಿತು ಅಧ್ಯಯನ ಉತ್ತರಾಖಂಡದ ಮದರಸಾ ಗಳಲ್ಲೂ ಶ್ರೀರಾಮನ ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದು ಧಾರ್ಮಿಕ ಸೌಹಾರ್ದತೆಯ ಸಂಕೇತವೂ ಆಗಿದೆ ಎನ್ನಲಾಗುತ್ತಿದೆ.
ಈ ಕುರಿತು ಉತ್ತರಾಖಂಡ ವಕ್ಸ್ ಫ ಬೋರ್ಡ್ ಚೇರ್ಮನ್ ಆಗಿರುವ ಶಾದಾಬ್ ಶಾಮ್ಸೌ ಅವರೇ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದ್ದರು. ಮದರಸಾ ಆಧುನೀಕರಣ ಯೋಜನೆಯ ಭಾಗವಾಗಿ ಇನ್ನು ಮುಂದೆ ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳ ಲಾಗುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ಪ್ರವಾದಿ ಮೊಹಮದರ ಜತೆಗೆ ಶ್ರೀರಾಮನ ಕುರಿತು ಕೂಡ ಅಧ್ಯಯನ ಮಾಡಲಿದ್ದಾರೆ ಎಂದು ತಿಳಿಸಿದ್ದರು.
ಶಾದಾಬ್ ಶಾಮ್ಸೌ ಅವರು ಬಿಜೆಪಿ ಮುಖಂಡರೂ ಆಗಿದ್ದು, ಅವರು ಮದರಸಾಗಳಲ್ಲಿ ಬೋಧನೆ ಮಾಡುವ ಮೌಲ್ವಿಗಳನ್ನೂ ಒಪ್ಪಿಸಿದ್ದಾರೆ. ಧರ್ಮ, ಜಾತಿಯ ಸಂಕೋಲೆಗಳು ಇಲ್ಲದೆಯೇ ರಾಮನನ್ನು ಆರಾಧಿಸಬಹುದು. ಆತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಮನೋಭಾವದಿಂದ ಶಾದಾಬ್ ಶಾಮ್ಸೌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಉತ್ತರಾಖಂಡದ ವಕ್ಸ್ ಫ ಬೋರ್ಡ್ ವ್ಯಾಪ್ತಿಗೆ ಸುಮಾರು 117 ಮದರಸಾಗಳು ಬರುತ್ತವೆ. ಡೆಹ್ರಾಡೂನ್, ಹರಿದ್ವಾರ, ಉಧಾಮ್ ಸಿಂಗ್ ನಗರ ಹಾಗೂ ನೈನಿತಾಲ್ ಜಿಲ್ಲೆ ಸೇರಿ ಹಲವೆಡೆ ವಕ್ಸ್ ಫ ಬೋರ್ಡ್ ವ್ಯಾಪ್ತಿಯ ಮದರಸಾಗಳಲ್ಲಿ ರಾಮನ ಕುರಿತ ಅಧ್ಯಾಯಗಳನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.