ಬೆಂಗಳೂರು,ಮಾ.29- ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ 2022ರ ಮಂಗಳೂರು ಕುಕ್ಕರ್‌ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಮೊಹಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಆತ ಸಲ್ಲಿಸಿದ್ದ ತಪೊಪ್ಪಿಗೆ ಅರ್ಜಿಯನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಅಧಿಕೃತವಾಗಿ ಅಂಗೀಕರಿಸಿದೆ. ನವೆಂಬರ್ 2022ರಲ್ಲಿ ಆಟೋರಿಕ್ಷಾದಲ್ಲಿ ಐಇಡಿ ಸ್ಫೋಟಿಸಿದ್ದನ್ನು ಒಪ್ಪಿಕೊಂಡಿರುವ ಶಾರೀಕ್, ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
ಶಿವಮೊಗ್ಗ ಮೂಲದ 27 ವರ್ಷದ ಮೊಹಮದ್ ಶಾರೀಕ್, 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿಯಲ್ಲಿ ಆಟೋರಿಕ್ಷಾದಲ್ಲಿ ಪ್ರೆಶರ್‌ಕುಕ್ಕರ್ ಬಾಂಬ್ ಸಾಗಿಸುತ್ತಿದ್ದ. ಈ ವೇಳೆ ಟೈಮರ್ ದೋಷದಿಂದಾಗಿ ಬಾಂಬ್ ಆತನ ಮಡಿಲಲ್ಲೇ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಶಾರೀಕ್ ಮತ್ತು ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು.
ಚಿಕಿತ್ಸೆಯ ನಂತರ ಎನ್‌ಐಎ ಅಧಿಕಾರಿಗಳು ಶಾರೀಕ್‌ನನ್ನು ಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ತನಿಖೆಯ ವೇಳೆ ಶಾರೀಕ್ ಐಸಿಸ್ ಪ್ರೇರಿತ ಶಿವಮೊಗ್ಗ ಮಾಡ್ಯೂಲ್‌ನ ಸಕ್ರಿಯ ಸದಸ್ಯ ಎಂಬುದು ದೃಢಪಟ್ಟಿತ್ತು. ಈತ 2020ರಲ್ಲಿ ಮಂಗಳೂರಿನಲ್ಲಿ ದೇಶವಿರೋಧಿ ಗೋಡೆ ಬರಹ ಬರೆದ ಪ್ರಕರಣದಲ್ಲಿಯೂ ಭಾಗಿಯಾಗಿದ್ದ. ಅಲ್ಲದೆ, 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದ ಐಇಡಿ ಪರೀಕ್ಷಾ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಈತನೇ ಆಗಿದ್ದ ಎಂಬುದು ಎನ್‌ಐಎ ತನಿಖೆಯಿಂದ ಬಹಿರಂಗವಾಗಿತ್ತು.
ತಪೊಪ್ಪಿಗೆಗೆ ಕಾರಣವೇನು ?
ಆರಂಭದಲ್ಲಿ 2024ರ ಏಪ್ರಿಲ್‌ನಲ್ಲಿ ನ್ಯಾಯಾಲಯದ ಮುಂದೆ ತಾನು ನಿರಪರಾಧಿ ಎಂದು ವಾದಿಸಿದ್ದ ಶಾರೀಕ್, 2025ರ ಡಿಸೆಂಬರ್‌ನಲ್ಲಿ ದಿಢೀರ್ ಆಗಿ ತನ್ನ ನಿಲುವು ಬದಲಿಸಿದ್ದ. ಕ್ರಿಮಿನಲ್ ಪೊಸೀಜರ್ ಕೋಡ್‌ನ ಸೆಕ್ಷನ್ 229ರ ಅಡಿಯಲ್ಲಿ ತಪೊಪ್ಪಿಗೆ ಅರ್ಜಿ ಸಲ್ಲಿಸಿ, ನಾನೇ ಕುಕ್ಕರ್‌ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ಈಗ ನನಗೆ ಪಶ್ಚಾತ್ತಾಪವಾಗಿದೆ, ಕಾನೂನು ಪ್ರಕಾರ ಶಿಕ್ಷೆ ನೀಡಿ ಎಂದು ಕೋರಿದ್ದ. ಮೂರು ತಿಂಗಳ ಸುದೀರ್ಘ ಪರಿಶೀಲನೆಯ ನಂತರ ಮಾರ್ಚ್ 26, 2026 ರಂದು ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯ ಮಾಡಿದೆ.
ಅಲ್ಲದೆ, 2024ರ ಮಾರ್ಚ್‌ನಲ್ಲಿ ನಡೆದ ಬೆಂಗಳೂರಿನ ಐತಿಹಾಸಿಕ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತನ ಜಾಲದ ಕೈವಾಡವಿರುವ ಬಗ್ಗೆ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.
