ಆನೇಕಲ್, ಮಾ.29- ಸಾಲಗಾರರ ಕಾಟದಿಂದ ಮನ ನೊಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು ತಾಯಿ-ಮಗಳು ಸಾವನ್ನಪ್ಪಿದರೆ, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಹೃದಯ ವಿದ್ರಾವಕ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ. ಮಲ್ಲೇನಹಳ್ಳಿ ಗ್ರಾಮದ ಆಶಾ (50) ಹಾಗೂ ಮಗಳು ವರ್ಷಿತಾ (35) ಸ್ಥಳ ದಲ್ಲೇ ಸಾವನ್ನಪ್ಪಿದ್ದಾರೆ.
ಆಶಾ ಅವರ ಪುತ್ರ ಮೋಹನ್‌ಗೌಡ (27) ಮತ್ತು ಮೊಮ್ಮಗ ಮಯಾನ್‌ಗೌಡ (11) ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಒಂದು ಕಡೆ ಐಷರಾಮಿ ಜೀವನ, ಮತ್ತೊಂದು ಕಡೆ ಅತಿಯಾದ ಸಾಲ, ಇನ್ನೊಂದು ಕಡೆ ಚೀಟಿ ವ್ಯವಹಾರ. 5 ಲಕ್ಷ, 10 ಲಕ್ಷ, 50ಲಕ್ಷದ ಚೀಟಿ ಜೊತೆಗೆ ಯುಗಾದಿಗೆ ಮಟನ್ ಚೀಟಿ, ದೀಪಾವಳಿಗೆ ಪಟಾಕಿ ಚೀಟಿ ಹೀಗೆ ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದವರು ಇಂದು ಮನೆಯಲ್ಲೇ ಶವವಾಗಿರುವುದು ದುರ್ದೈವ.
ಮನೆ ಮಗ ಮೋಹನ್‌ಗೌಡ ಕೋಟ್ಯಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸಾಲಗಾರರು ಹಣ ವಾಪಸ್ ಕೇಳುತ್ತಿದ್ದರು. ಹಣ ಹಿಂದಿರುಗಿಸಲು ಸಾಧ್ಯವಾಗದೆ ಸಾಲಗಾರರ ಉಪಟಳದಿಂದ ಈ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿದೆ.
ಅದರಂತೆ ನಿನ್ನೆ ರಾತ್ರಿ ಈ ಕುಟುಂಬ ನಾವು ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮಾಡಿದೆ. ನಂತರ ಮನೆ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಾರೆ.
ಮೋಹನ್‌ಗೌಡ ತನ್ನ ತಾಯಿ, ಅಕ್ಕ ಹಾಗೂ ಅಕ್ಕನ ಮಗನ ಕತ್ತು ಕೊಯ್ದು ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.ವಿಡಿಯೋ ಹರಿಬಿಟ್ಟ ಕೆಲವೇ ನಿಮಿಷಗಳಲ್ಲಿ ಸಂಬಂಽಕರು ಗಮನಿಸಿ ಗಾಬರಿಯಾಗಿ ತಕ್ಷಣ ಇವರ ಮನೆ ಬಳಿಗೆ ಬಂದು ಕಾಲಿಂಗ್ ಬೆಲ್ ಒತ್ತಿ ಬಾಗಿಲು ಬಡಿದಿದ್ದಾರೆ.
ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆ ಹಿಂಬಾಗಿಲ ಮೂಲಕ ಸಂಬಂಧಿಕರು ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ನಾಲ್ಕು ಮಂದಿ ಬಿದ್ದಿರುವುದು ಕಂಡು ಬಂದಿದೆ. ಅಷ್ಟೊತ್ತಿಗಾಗಲೇ ತಾಯಿ-ಮಗಳ ಪ್ರಾಣಪಕ್ಷಿ ಹಾರಿಹೋಗಿತ್ತು.
ತಕ್ಷಣಪೊಲೀಸರಿಗೆ ವಿಷಯ ತಿಳಿಸಿದ ಸಂಬಂಧಿಕರು, ತೀವ್ರ ರಕ್ತಸ್ರಾವವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೋಹನ್‌ಗೌಡ ಹಾಗೂ ಮಾಯಾಂಕ್‌ನನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾತ್ರಿ 10.30ರ ಸುಮಾರಿಗೆ ಆತ್ಮಹತ್ಯೆ ಯತ್ನದ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಅತ್ತಿಬೆಲೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದು ಅತಿಯಾದ ಸಾಲ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್‌ಪಿ ತಿಳಿಸಿದರು. ಈ ಬಗ್ಗೆ ಅತ್ತಿಬೆಲೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
