Tuesday, April 14, 2026
Homeರಾಜ್ಯರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚೇತರಿಕೆ, ವಾಡಿಕೆಗಿಂತ ಹೆಚ್ಚು ವರ್ಷಧಾರೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚೇತರಿಕೆ, ವಾಡಿಕೆಗಿಂತ ಹೆಚ್ಚು ವರ್ಷಧಾರೆ

Pre-Monsoon Rains recover in the state, rainfall is more than usual

ಬೆಂಗಳೂರು,ಮಾ.29- ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚೇತರಿಕೆ ಕಂಡಿದ್ದು, ವಾಡಿಕೆಗಿಂತ ಹೆಚ್ಚಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರ ಬೇಸಿಗೆ ಮಳೆಯಾಗುವ ಸಾಧ್ಯತೆಗಳಿವೆ.

ಕಳೆದ ಮೂರು ವಾರಗಳಿಂದಲೂ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ಆಲಿಕಲ್ಲು, ಬಿರುಗಾಳಿ ಸಮೇತ ಮಳೆಯಾಗುತ್ತಿದ್ದರೆ ಮತ್ತೆ ಕೆಲವೆಡೆ ಮಿಂಚು, ಗುಡುಗಿನಿಂದ ಕೂಡಿದ ಮಳೆಯಾಗಿದೆ.ಆಲಿಕಲ್ಲು, ಬಿರುಗಾಳಿ ಸಹಿತ ಮಳೆಯಾಗಿರುವ ಕಡೆಗಳಲ್ಲಿ ಹಣ್ಣು, ತರಕಾರಿ ಹಾಗೂ ಕೃಷಿ ಬೆಳೆಗಳು ಹಾನಿಗೀಡಾಗಿ ರೈತರಿಗೆ ನಷ್ಟ ಉಂಟಾಗಿದೆ.

ನಿನ್ನೆ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆಯಾಗಿದೆ. ಶಿವಮೊಗ್ಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದರೆ, ಚಿಕ್ಕಮಗಳೂರಿನಲ್ಲಿ ಆಲಿಕಲ್ಲು, ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಒಂದೆರೆಡು ಕಡೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗುವ ಮುನ್ಸೂಚನೆಗಳಿವೆ.

ಬೇಸಿಗೆ ಮಳೆಯಾಗಿರುವುದರಿಂದ ಮಿಂಚು, ಗುಡುಗು, ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಗಳು ಇದ್ದು, ಭಾರೀ ಮಳೆ ಅಥವಾ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳು ಇಲ್ಲ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜನವರಿಯಿಂದ ನಿನ್ನೆವರೆಗೆ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆ ಕೊರತೆ ಕಂಡುಬಂದಿದ್ದರೂ ಒಟ್ಟಾರೆ ವಾಡಿಕೆಯಷ್ಟು ರಾಜ್ಯದಲ್ಲಿ ಮಳೆಯಾಗಿದೆ. ಈ ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ ಕಂಡುಬಂದರೆ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು.

ಮಾರ್ಚ್‌ ತಿಂಗಳಿನಲ್ಲಿ ಇದುವರೆಗೆ ಕೊಡಗು, ಯಾದಗಿರಿ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಉಳಿದೆಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.ಆದರೆ ಕಳೆದೊಂದು ವಾರದಲ್ಲಿ ದಕ್ಷಿಣ ಒಳನಾಡಿನ ದಾವಣಗೆರೆ, ತುಮಕೂರು ಹೊರತುಪಡಿಸಿದರೆ ಉಳಿದೆಲ್ಲಾ ಜಿಲ್ಲೆಗಳಲ್ಲೂ ಮಳೆ ಕೊರತೆ ಕಂಡುಬಂದಿದ್ದು, ಶೇ.56 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಉಳಿದೆಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಒಟ್ಟಾರೆ ದುಪ್ಪಟ್ಟು ಮಳೆ ಬಿದ್ದಿದೆ.

ಮಲೆನಾಡು ಭಾಗದ ಹಾಸನ, ಕೊಡಗು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ.
ಮಾರ್ಚ್‌, ಏಪ್ರಿಲ್‌, ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಅಥವಾ ಬೇಸಿಗೆ ಮಳೆಯಾಗುವುದು ಸಾಮಾನ್ಯ. ಈ ಅವಧಿಯಲ್ಲಿ ಬೇಸಿಗೆ ಬೆಳೆಗಳ ಕಟಾವು ಒಂದೆಡೆಯಾದರೆ ಮುಂಗಾರು ಹಂಗಾಮಿಗೆ ಭೂಮಿ ಸಿದ್ಧಗೊಳಿಸುವ ಪ್ರಕ್ರಿಯೆಗಳು ನಡೆಯುತ್ತವೆ.

ಸಾಮಾನ್ಯವಾಗಿ ಆಲಿಕಲ್ಲು, ಬಿರುಗಾಳಿ ಮಳೆ ಹೆಚ್ಚಾಗಿರುವರಿಂದ ರೈತರಿಗೆ ಮಳೆಯಿಂದ ಉಂಟಾಗುವ ಹಾನಿಯೇ ಹೆಚ್ಚಾಗಿರುತ್ತದೆ. ಆದರೆ ಬೇಸಿಗೆ ಬಿರುಬಿಸಿಲಿನಿಂದ ಬಳಲುವ ಜನರಿಗೆ ಆಗಾಗ್ಗೆ ಬೀಳುವ ಮಳೆ ತುಸು ಸಮಾಧಾನ ತಂದಿದೆ.

RELATED ARTICLES

Latest News