ಮಂಡ್ಯ,ಮಾ.29- ವಿಶ್ವವಿಖ್ಯಾತ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟಧಾರಣೆ ಮಹೋತ್ಸವವು ಕಳೆದ ರಾತ್ರಿ ಮಳೆಯ ನಡುವೆಯೂ ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಪರಾಭವನಾಮ ಸಂವತ್ಸವರದ ಮೀನ-ಚೈತ್ರ ಮಾಸದ ಪುಷ್ಯ ನಕ್ಷತ್ರದ ಶುಭದಿನ ಕೂಡಿದ ಬ್ರಹೋತ್ಸವದ ನಾಲ್ಕನೇ ದಿನ ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಮುಖ ದಿನದಂದು ಸಾಕ್ಷಾತ್ ಭಗವಂತನದ್ದೆಂದೇ ಪ್ರತೀತಿಯಿರುವ ವೈರಮುಡಿ ಕಿರೀಟವನ್ನು ಶ್ರೀದೇವಿ-ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ತೊಡಿಸಲಾಯಿತು.
ಇದಕ್ಕೂ ಮುನ್ನ ಗರುಡದೇವನ ಉತ್ಸವ ನಡೆದ ಚೆಲುವರಾಯಸ್ವಾಮಿ ಮಹಾಮಂಗಳಾರತಿ ಜಟ ಗೋವಿಂದನಾಮ ಸರಣೆ/ ಘೋಷಣೆಯೊಂದಿಗೆ ವೈರಮುಡಿ ಉತ್ಸವಕ್ಕೆ ಚಾಲನೆ ದೊರೆಯಿತು.
ವೈರಮುಡಿ ಧರಿಸಿ ಭವ್ಯ ತೋಮಾಲೆಗಳು ದಿವ್ಯಾಭರಣಗಳೊಂದಿಗೆ ಅಲಂಕೃತನಾದ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ರಾಜಗೋಪುರದ ಬಳಿ ಬರುತ್ತಿದ್ದಂತೆ ಭಾರೀ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ವೈರಮುಡಿ ಉತ್ಸವ ರಾಜಬೀದಿಗಳಲ್ಲಿ ತೆರಳುವ ವೇಳೆ ಕಿಕ್ಕಿರಿದು ತುಂಬಿದ್ದ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಇದಕ್ಕೂ ಮುನ್ನ ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆ ನಂತರ ಮಹಾಮಂಗಳಾರತಿ, ಪ್ರಾರ್ಥನೆ ಸಲ್ಲಿಸಲಾಯಿತು.
ದೇವಾಲಯದ ಎಡಭಾಗದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಸ್ವಾಮಿಗೆ ಮತ್ತೊಮೆ ಮಂಗಳಾರತಿ ಮಾಡಲಾಯಿತು. ನಂತರ ಮೇಲುಕೋಟೆ ಚತುರ್ವೀದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ತಿರುವಾಭರಣ ಪೆಟ್ಟಿಗೆಗೆ ಪೂಜೆ :
ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಾರ್ವತಿ ಮಂಟಪದ ಬಳಿಯ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ ಸಂಜೆ 5ರ ವೇಳೆಗೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು. ಮೇಲುಕೋಟೆ ಯತಿರಾಜದಾಸರ್ ಗುರುಪೀಠದಲ್ಲಿ ಕೊನೆ ಸಾಂಪ್ರದಾಯಿಕ ಪೂಜೆ ನೆರವೇರಿದ ನಂತರ ವೈರಮುಡಿ- ರಾಜಮುಡಿ ತಿರುವಾಭರಣ ಪಟ್ಟಿಗೆಗಳಿದ್ದ ಬಂಗಾರದ ಪಲಕ್ಕಿ ದೇವಾಲಯ ಪ್ರವೇಶಿಸಿತು.
ರಾಜಮುಡಿ ಕಿರೀಟ ಹಸ್ತಾಂತರ :
ಸಂಜೆ 5 ಗಂಟೆ ವೇಳೆಗೆ ಮೇಲುಕೋಟೆಗೆ ಬಂದ ವೈರಮುಡಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಚಿನ್ನದ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆಯಲ್ಲಿ ತರಲಾಯಿತು. ರಾತ್ರಿ ಚೆಲುವನಾರಾಯಣಸ್ವಾಮಿ ಸನ್ನಿಧಿಯ ಮುಂಭಾಗ ನವರಂಗದ ಮಧ್ಯ ಭಾಗದಲ್ಲಿ ರಾಜಮುಡಿ ತಿರುವಾಭರಣಪಟ್ಟಿಗೆಯನ್ನು ತೆರೆದು ರಾಜಮುಡಿ ಕಿರೀಟ, ಗಂಡಭೇರುಂಡ ಪದಕ, ಪನ್ನಪಾದ ಶಂಖ, ಚಕ್ರ ಗದಾಂಗಿ ಸೇರಿದಂತೆ 16 ವಿಧದ ವಜ್ರಾಭರಣಗಳನ್ನು ಸಚಿವ ಚಲುವರಾಯಸ್ವಾಮಿ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ ಸೇರಿದಂತೆ ಜಿಲ್ಲಾಧಿಕಾರಿ ಡಾ. ಕುಮಾರ್ ಹಾಗೂ ಅಧಿಕಾರಿಗಳ ಸಮಕ್ಷಮ ಪರಿಶೀಲಿಸಿ ಸ್ಥಾನಿಕರು, ಅರ್ಚಕರು ಪರಿಚಾರಕರಿಗೆ ಹಸ್ತಾಂತರ ಮಾಡಿದರು.
ವೈರಮುಡಿ ತಿರುವಾಭರಣ ಪೆಟ್ಟಿಗೆಯನ್ನು ನೇರವಾಗಿ ದೇವರ ಅಲಂಕಾರಕ್ಕೆ ನೀಡಲಾಯಿತು. ರಾಜಮುಡಿ ಕಿರೀಟ ಮತ್ತು ತಿರುವಾಭರಣಗಳು ಏ.2ರವರೆಗೆ ಬ್ರಹೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಲಿವೆ.
