ಕಾನ್ಪುರ ,ಸೆ.24-ಕಳೆದ ವರ್ಷ ಮೃತಪಟ್ಟ ಆದಾಯ ತೆರಿಗೆ ಇಲಾಖೆ ನೌಕರ ಕೋಮಾದಲ್ಲಿದ್ದಾನೆ ಎಂದು ಭಾವಿಸಿ ಅವನ ಕುಟುಂಬ ವರ್ಗದವರು, ಸುಮಾರು 18 ತಿಂಗಳ ಕಾಲ ಆತನ ಶವವನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಕಣ್ಣೂರಿನಲ್ಲಿ ನಡೆದಿದೆ.
ಸತ್ತ ಪತಿಯ ಶವ ಕೊಳೆಯಬಾರದು ಎಂದು ಆತನ ಪತ್ನಿ ಪ್ರತಿದಿನ ಶವದ ಮೇಲೆ ಗಂಗಾಜಲ ಎರಚುತ್ತ ಇಂದಲ್ಲ, ನಾಳೆ ನನ್ನ ಪತಿ ಮೇಲೇಳುತ್ತಾನೆ ಎಂದು ಭಾವಿಸಿಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
2021 ರ ಏಪ್ರಿಲ್ 22 ರಂದು ಹಠಾತ್ ಹೃದಯ ಸ್ಥಂಬನದಿಂದ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಎಂಬುವರ ಸಾವನ್ನಪ್ಪಿದ್ದರು. ಆದರೆ ಅವರ ಕುಟುಂಬ ವರ್ಗದವರು ಆತನ ಅಂತ್ಯಕ್ರಿಯೆಗಳನ್ನು ಮಾಡದೆ ಆತ ಇನ್ನು ಕೋಮಾದಲ್ಲಿದ್ದಾರೆ ಎಂದು ನಂಬಿಕೊಂಡು ಕಳೆದ 18 ತಿಂಗಳಿನಿಂದ ಶವವನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು ಎಂದು ಮುಖ್ಯ ವೈದ್ಯಕೀಯ ಅಕಾರಿ ಡಾ ಅಲೋಕ್ ರಂಜನ್ ತಿಳಿಸಿದ್ದಾರೆ.
ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಜೊತೆಗೆ ಆರೋಗ್ಯ ಅಧಿಕಾರಿಗಳ ತಂಡ ರಾವತ್‍ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ಬಂದು ತಪಾಸಣೆ ನಡೆಸಲು ಮುಂದಾದಾಗ ಮನೆಯವರು ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ನಂಬಿಸಲು ಯತ್ನಿಸಿದರು.
ಸಾಕಷ್ಟು ಮನವೊಲಿಕೆಯ ನಂತರ, ಕುಟುಂಬ ಸದಸ್ಯರು ದೇಹವನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕೊಂಡೊಯಲು ಅವಕಾಶ ನೀಡಿದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಆತ 18 ತಿಂಗಳ ಹಿಂದೆಯೇ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಮನೆಯವರು ಆಗಾಗ್ಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ವೈದ್ಯರ ತಂಡದೊಂದಿಗೆ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಸತ್ಯಾಂಶ ಬೆಳಕಿಗೆ ಬಂದಿದೆ.