ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಲ್ಲಿ ಖಾಲಿಯಿವೆ 927 ಮಳಿಗೆಗಳು

Social Share

ಬೆಂಗಳೂರು, ಫೆ.18- ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ನಿರ್ಮಿಸಲಾದ 4,465 ವಾಣಿಜ್ಯ ಮಳಿಗೆಗಳ ಪೈಕಿ 927 ಮಳಿಗೆಗಳು ಖಾಲಿ ಉಳಿದಿವೆ ಎಂದು ತಿಳಿಸಿರುವ ಸಾರಿಗೆ ಸಚಿವ ಶ್ರೀರಾಮುಲು, ಅವುಗಳಿಂದ ಮಾಸಿಕ 13.61 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಕೆಲ ಮಳಿಗೆಗಳನ್ನು ಅಡಮಾನ ಮಾಡಿ 540 ಕೋಟಿ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 1543 ಮಳಿಗೆಗಳನ್ನು ನಿರ್ಮಿಸಲಾಗಿದೆ, ಅವುಗಳಿಂದ ಪ್ರತಿ ತಿಂಗಳು 3.91 ಕೋಟಿ ರೂಪಾಯಿ ಆದಾಯ ಬರುತ್ತಿದೆ. 388 ಮಳಿಗೆಗಳು ಖಾಲಿ ಉಳಿದಿವೆ. ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಸಂಸ್ಥೆಯಿಂದ 371 ಮಳಿಗೆಗಳನ್ನು ನಿರ್ಮಿಸಲಾಗಿದ್ದು, 6.72 ಕೋಟಿ ಮಾಸಿಕ ಆದಾಯ ಬರುತ್ತಿದೆ.
61 ಮಳಿಗೆಗಳು ಖಾಲಿ ಇವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 1296 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಮಾಸಿಕ 1.48 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲಾಗುತ್ತಿದೆ. 207 ಮಳಿಗೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1255 ಮಳಿಗೆಗಳನ್ನು ನಿರ್ಮಿಸಲಾಗಿದೆ, ಮಾಸಿಕ 1.5 ಕೋಟಿ ಆದಾಯ ಸಂಗ್ರಹವಾಗುತ್ತಿದ್ದು, 271 ಮಳಿಗೆಗಳು ಖಾಲಿ ಉಳಿದಿವೆ ಎಂದರು ತಿಳಿಸಿದ್ದಾರೆ.
ಕೆಎಸ್ ಆರ್ ಟಿ ಸಿ ಸಂಸ್ಥೆಯಿಂದ ಯಾವುದೇ ವಾಣಿಜ್ಯ ಮಳಿಗೆಗಳನ್ನು ಅಡಮಾನ ಮಾಡಿಲ್ಲ. ಬಿಎಂಟಿಸಿಯಿಂದ ಶಾಂತಿನಗರ ಸಂಚಾರಿ ಮತ್ತು ಸಾರಿಗೆ ನಿರ್ವಹಣಾ ಕೇಂದ್ರದ ಕಟ್ಟಡ (ಟಿಟಿಎಂಸಿ)ವನ್ನು ಕೆನರಾ ಬ್ಯಾಂಕ್ ನಲ್ಲಿ 390 ಕೋಟಿ ರೂಪಾಯಿಗೆ ಅಡಮಾನ ಮಾಡಲಾಗಿದೆ.
ವಾಯುವ್ಯ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ನಗರದ ಹೂಸೂರುನಲ್ಲಿರುವ ವಾಣಿಜ್ಯ ಮಳಿಗೆಯನ್ನು ನೂರು ಕೋಟಿ ರೂಪಾಯಿಗಳಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾಗೆ ಅಡಮಾನ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಬಸ್ ನಿಲ್ದಾಣದ 6.28 ಎಕರೆ ನಿವೇಶನವನ್ನು ಕೆನರಾ ಬ್ಯಾಂಕ್ ಗೆ 50 ಕೋಟಿ ರೂಪಾಯಿಗೆ ಅಡಮಾನ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

Articles You Might Like

Share This Article