ಕ್ಯಿವ್, ಮಾ.5- ರಷ್ಯಾದ ನಿರಂತರ ಸೆಲ್ ದಾಳಿಯಿಂದ ಯುದ್ಧಪೀಡಿತ ಉಕ್ರೇನ್ ಒತ್ತಡಕ್ಕೆ ಒಳಗಾಗಿದ್ದು, ಹತಾಶ ಸ್ಥಿತಿಯತ್ತ ಧಾವಿಸುತ್ತಿದೆ. ಕ್ಯಿವ್, ಖರ್ಕೀವ್, ಮುರಿಯೋಪೋಲ್ ಸೇರಿದಂತೆ ಪ್ರಮುಖ ನಗರಗಳು ಛಿದ್ರವಾಗಿದ್ದು, ಸ್ಮಶಾನ ಸದೃಶವಾಗಿವೆ. ಈಗಾಗಲೇ ಖೆರೋಸನ್ ನಗರ ರಷ್ಯನ್ನರ ಪಾಲಾಗಿದೆ. ಖಾರ್ಕೀವ್ ನ ವಶಕ್ಕಾಗಿ ಹೋರಾಟ ನಡೆಯುತ್ತಿದೆ. ರಾಜಧಾನಿ ಕ್ಯಿವ್‍ನಲ್ಲಿ ರಣಭೀಕರ ಪರಿಸ್ಥಿತಿ ಇದ್ದು ಹಾದಿಬೀದಿಯಲ್ಲಿ ಮೃತದೇಹಗಳು ಸಿಗುತ್ತಿವೆ.
ಮರಿಯುಪೋಲ್ ಕೂಡ ದಾಳಿಗೆ ಒಳಗಾಗಿದೆ. ಈಶಾನ್ಯ ಉಕ್ರೇನ್‍ನ ನಗರ ಸುಮಿ ಪ್ರದೇಶದಲ್ಲಿ ವಿದೇಶಿ ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಆರೋಪಗಳು ಕೇಳಿಬಂದಿವೆ. ಈ ನಡುವೆ ಏಕಾಂಗಿ ಹೋರಾಟ ನಡೆಸುತ್ತಿರುವ ಉಕ್ರೇನ್‍ನ ಅಧ್ಯಕ್ಷ ವೋಡ್ಲಿಮಿರ್ ಜೆಲೆನ್ಸ್ಕಿ ನ್ಯಾಟೋ ಪಡೆಯ ನಿರ್ಧಾರವನ್ನು ಖಂಡಿಸಿದ್ದಾರೆ. ಕ್ಯೀವ್‍ನ್ನು ಹಾರಾಟ ನಿಷೇಧ ಪ್ರದೇಶವನ್ನಾಗಿ ನ್ಯಾಟೋ ಒಕ್ಕೂಟ ಘೋಷಿಸಿದ್ದು ಇದನ್ನು ಹಿಂಪಡೆಯುವಂತೆ ಜೆಲೆನ್ಸ್ಕಿ ಆಗ್ರಹಿಸಿದ್ದಾರೆ.
ನಿನ್ನೆ ರಷ್ಯಾ ಉಕ್ರೇನ್‍ನ ಝೋಪೋರಿಜಝೀಯದಲ್ಲಿನ ಅಣು ಉತ್ಪಾದನ ಸ್ಥಾವರದ ಮೇಲೆ ದಾಳಿ ನಡೆಸಿ ನಂತರ ಅದನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ತುರ್ತು ಸಭೆ ನಡೆಸಿದ್ದು, ಅಣು ದಾಳಿಯ ಸಂಭವನೀಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಉಕ್ರೇನ್‍ನಲ್ಲಿ ರೋನೌ, ಚರ್ನೋಬೊಲಿ, ಝೋಪೋರಿಜಝೀ ಮತ್ತು ಖ್ಮೆಲನ್ಟಿಸ್ಕೈನ ನಾಲ್ಕು ಅಣು ಸ್ಥಾವರಗಳಿವೆ. ರಷ್ಯಾ ಈಗಾಗಲೇ ಕಪ್ಪು ಸಮುದ್ರದ ಮಾರ್ಗವಾಗಿ ದಾಳಿ ಆರಂಭಿಸಿ ಝೋಪೋರಿಜಝೀಯ ಸ್ಥಾವರವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದರಿಂದ ಚರ್ನೋಬೊಲಿ ಸ್ಥಾವರ ಕೂಡ ರಷ್ಯಾನ್ನರ ಪಾಲಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ತುರ್ತು ಸಭೆ ನಡೆಸಿದೆ.
ಈಗಾಗಲೇ ಆಕ್ರಮಣಕ್ಕೆ ಗುರಿಯಾಗಿರುವ ಅಣುಸ್ಥಾವರದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸುತ್ತಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷರು ರಷ್ಯಾದ ಅಣು ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು.
ನಾವು ಕಾರ್ಯಾಚರಣೆಯನ್ನು ಚಾಲ್ತಿಯಲ್ಲಿಟ್ಟಿದ್ದು, ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ. ರಷ್ಯಾ ವಾಯುಮಾರ್ಗವನ್ನು ಬಳಸಲು ನಿರ್ಬಂಧ ಹೇರಬೇಕು. ಜಗತ್ತು ಅಪಾಯಕಾರಿ ಪರಿಸ್ಥಿತಿಯನ್ನು ನೋಡುತ್ತಾ ಕುಳಿತುಕೊಳ್ಳಬಾರದು. ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಈ ನಡುವೆ ವಿಶ್ವದ ಆರ್ಥಿಕ ಪಾಲುದಾರ ದೇಶಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ವಿಶ್ವಬ್ಯಾಂಕ್ ಸೇರಿದಂತೆ ಬಹಳಷ್ಟು ಸಂಸ್ಥೆಗಳು ತಮಗೆ ನೆರವು ನೀಡುವ ಭರವಸೆ ನೀಡಿವೆ. ಇದರಿಂದಾಗಿ ರಷ್ಯಾದ ಆಕ್ರಮಣದಿಂದ ಹೊರಬರುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಉಕ್ರೇನ್‍ನ ಪರಿಸ್ಥಿತಿ ಘನಘೋರವಾಗಿದೆ. ಸುಮಾರು 500ಕ್ಕೂ ಹೆಚ್ಚು ಶೆಲ್ ದಾಳಿಗಳನ್ನು ರಷ್ಯಾ ನಡೆಸಿದ್ದು, ಉಕ್ರೇನ್‍ನ ಬಹುತೇಕ ನಗರಗಳು ಛಿದ್ರವಾಗಿವೆ.
ಜನವಸತಿ ಪ್ರದೇಶಗಳು ಧ್ವಂಸಗೊಂಡಿವೆ, ಬೆಂಕಿಯ ಕೆನ್ನಾಲಗೆ, ಭಸ್ಮವಾದ ಅವಶೇಷಗಳ ಹೊಗೆ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. ಒಂದೆಡೆ ರಷ್ಯಾ ಜೊತೆ ಕಾದಾಡುತ್ತಲೇ ಹಾನಿಗೊಳಗಾಗಿರುವ ಪ್ರದೇಶಗಳ ಪುನರ್ವಸತಿಗೂ ಶ್ರಮಿಸುತ್ತಿದೆ. ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕ ಮಂಡಿಸಿದ ಪ್ರಸ್ತಾವನೆಗೆ ರಷ್ಯಾ ಬೆಲೆ ನೀಡಿಲ್ಲ. ಈ ನಡುವೆ ಟರ್ಕಿ ಸಂಧಾನದ ಮಧ್ಯಸ್ಥಿತಿಕೆ ವಹಿಸಲು ಮುಂದೆ ಬಂದಿದೆ. 10 ದಿನಗಳಿಗೆ ಕಾಲಟ್ಟಿರುವ ಯುದ್ಧ ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ.
ವಿಶ್ವದ ವಿವಿಧ ರಾಷ್ಟ್ರಗಳ ಆರ್ಥಿಕ ಹಾಗೂ ವಾಣಿಜ್ಯ ದಿಗ್ಬಂಧನಕ್ಕೆ ಪ್ರತಿಯಾಗಿ ರಷ್ಯಾ ಕೂಡ ಸುದ್ದಿ ಸಂಸ್ಥೆಗಳು, ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಅಮೆರಿಕ ಹಾಗೂ ಇತರ ದೇಶಗಳ ವಹಿವಾಟು ಸಂಸ್ಥೆಗಳನ್ನು ನಿರ್ಬಂಸಿದೆ.
