ಬೆಂಗಳೂರು,ಜು.26- ಸಿಲಿಕಾನ್ ಸಿಟಿ ಇತ್ತಿಚೆಗೆ ಬೌ ಬೌ ಸಿಟಿಯಾಗಿ ಪರಿವರ್ತನೆಯಾಗುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಯಾಕೆ ಅಂತೀರಾ, ನಗರದಲ್ಲಿ ಬೀದಿನಾಯಿಗಳ ಹಾವಳಿ ಮೀತಿ ಮೀರಿದ್ದು, ಪ್ರತಿನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ.
ನಗರದ ಅಷ್ಟ ದಿಕ್ಕುಗಳಲ್ಲೂ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ರಾತ್ರಿಯಾಗುತ್ತಿದ್ದಂತೆ ಜನ ಸಾಮಾನ್ಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಡಕಂಡಲ್ಲಿ ಬೀದಿ ನಾಯಿಗಳು ದಾಳಿ ಮಾಡುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ಜನ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ ಎಂದರೆ ನೀವೇ ಊಹಿಸಿ ನಾಯಿಗಳ ಹಾವಳಿ ಇನ್ನೆಷ್ಟಿರಬಹದು ಎಂದು.
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಇದುವರೆಗೂ 52 ಸಾವಿರಕ್ಕೂ ಹೆಚ್ಚು ಮಂದಿ ನಾಯಿ ದಾಳಿಗೆ ಒಳಗಾಗಿದ್ದಾರೆ. ಕಳೆದ 2020ರಲ್ಲಿ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದರು, ಇದರ ಜೊತೆಗೆ ಶಾಲಾ ಮಕ್ಕಳು, ವಯಸ್ಸಾದವರ ಮೇಲೂ ಬೀದಿ ನಾಯಿಗಳ ಹಿಂಡು ಮಾರಣಾಂತಿಕ ದಾಳಿ ನಡೆಸಿದ್ದನ್ನು ಜನ ಇನ್ನು ಮರೆತಿಲ್ಲ.
ಬಿಬಿಎಂಪಿ ಲೆಕ್ಕಾಚಾರದಲ್ಲಿ ನಗರದಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ನಾಯಿ ದಾಳಿ ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲದಿರುವುದು ವಿಪರ್ಯಾಸವೇ ಸರಿ.
2022ರ ಜನವರಿಯಿಂದ ಇಲ್ಲಿಯವರೆಗೆ ಸರಿಸುಮಾರು 10 ಸಾವಿರ ಮಂದಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ.
ಜನವರಿಯಲ್ಲಿ 1677, ಫೆಬ್ರವರಿಯಲ್ಲಿ 1135, ಮಾರ್ಚ್‍ನಲ್ಲಿ 1800, ಏಪ್ರಿಲ್‍ನಲ್ಲಿ 1677, ಮೇ ತಿಂಗಳಿನಲ್ಲಿ 1841, ಜೂನ್‍ನಲ್ಲಿ 1140 ಹಾಗೂ ಜುಲೈ ತಿಂಗಳಿನಲ್ಲಿ 483 ಮಂದಿ ನಾಯಿ ದಾಳಿಗೆ ತುತ್ತಾಗಿದ್ದಾರೆ.
ವಲಯವಾರು ವಿವರ:
ಬೊಮ್ಮನಹಳ್ಳಿ-51
ದಾಸರಹಳ್ಳೀ-1
ಪೂರ್ವ ವಲಯ-3271
ಮಹದೇವಪುರ-387
ಆರ್‍ಆರ್‍ನಗರ-136
ದಕ್ಷಿಣ-2240
ಯಲಹಂಕ-390
ಒಟ್ಟಾರೆ, ಇದುವರೆಗೂ ಕಳೆದ ಮೂರು ವರ್ಷಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವುದು ಬಿಬಿಎಂಪಿ ದಾಖಲೆಗಳಿಂದ ಬಹಿರಂಗಗೊಂಡಿದೆ.