ಚೀನಾದಲ್ಲಿ ಪ್ರಬಲ ಭೂಕಂಪ, 17 ಮಂದಿಸಾವು, 122 ಮಂದಿಗೆ ಗಾಯ

ಬೀಜಿಂಗ್, ಜೂ.18-ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿಯಿಂದ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ 17 ಮಂದಿ ಮೃತಪಟ್ಟು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಯಿಬಿನ್ ನಗರದ ಚಾಂಜಿಂಗ್ ಕೌಂಟಿ ಪ್ರದೇಶದಲ್ಲಿ ನಿನ್ನೆ ರಾತ್ರಿ 10.55ರಲ್ಲಿ ಮೊದಲ ಭೂಕಂಪ ಸಂಭವಿಸಿತು. ಅದಾದ ನಂತರ ಇಂದು ಮುಂಜಾನೆ ಅದೇ ಪ್ರದೇಶದ ಬಳಿ ಮತ್ತೊಂದು ಭೂಕಂಪವಾಯಿತು.

ಈ ಎರಡೂ ಭೂಕಂಪಗಳು ಅನುಕ್ರಮವಾಗಿ 6.0 ಮತ್ತು 5.3 ತೀವ್ರತೆಗಳನ್ನು ಹೊಂದಿದ್ದವು ಎಂದು ಚೀನಾ ಭೂಕಂಪ ಕೇಂದ್ರ (ಸಿಇಎನ್‍ಸಿ) ತಿಳಿಸಿದೆ. ಈ ಪ್ರಾಂತ್ಯದಲ್ಲಿ ಈ ಎರಡು ಪ್ರಬಲ ಭೂಕಂಪನದಿಂದ ಕನಿಷ್ಟ 17 ಮಂದಿ ಮೃತಪಟ್ಟು, 122 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದಿಂದ ಕುಸಿದ ಮನೆಗಳ ಅವಶೇಷಗಳಡಿ ಕೆಲವರು ಸಿಲುಕಿದ್ದಾರೆ.

ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ದಳದ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. ಶೌಂಗ್ಲೆ ಪಟ್ಟಣದಲ್ಲಿ ಭೂಕಂಪದ ನಂತರ ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಅವರ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಭೂಕಂಪದಿಂದಾಗಿ ಕೆಲವು ಮನೆಗಳು, ವಿದ್ಯುತ್ ಕಂಬಗಳು ಮತ್ತು ಮರಗಿಡಗಳು ಉರುಳಿ ಬಿದ್ದಿವೆ. ರಕ್ಷಣಾ ಕಾರ್ಯಕರ್ತರು ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

Sri Raghav

Admin