ಗೃಹ ಸಚಿವರ ಹುದ್ದೆ ಖಾಲಿ ಇದೆ ಎಂದು ಜಾಹೀರಾತು ನೀಡಬೇಕು : ಶಾಸಕ ಯತ್ನಾಳ್

ವಿಜಯಪುರ,ಏ.19- ಕರ್ನಾಟಕದಲ್ಲಿ ಸದ್ಯ ಇರುವ ಪರಿಸ್ಥಿತಿಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲ ಪ್ರಬಲ ಗೃಹಸಚಿವ (ಸ್ಟ್ರಾಂಗ್ ಹೋಮ್ ಮಿನಿಸ್ಟರ್)ರ ಅವಶ್ಯಕತೆಯಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯ ಗಲಭೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕದ ಗೃಹ ಸಚಿವರ ಹುದ್ದೆ ಖಾಲಿ ಇದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ರಾಜ್ಯದಲ್ಲಿನ ಇತ್ತೀಚಿನ ಗಲಭೆಗಳ ಬಗ್ಗೆ ಹಾಲಿ ಗೃಹ ಸಚಿವರಿಗೆ ಸಾಫ್ಟ್ ಕಾರ್ನರ್ ಇದ್ದಂತಿದೆ ಎಂದು ಆರೋಪಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟ ಸ್ಥಳಗಳಲ್ಲಿ ಹಿಂಸಾಚಾರ ನಡೆಯುತ್ತಿದೆ ಹೀಗಾಗಿ, ರಾಜ್ಯಕ್ಕೆ ಬಲಿಷ್ಠ ಗೃಹ ಸಚಿವರ ಅವಶ್ಯಕತೆ ಇದೆ ಎಂದು ಯತ್ನಾಳ್ ಹೇಳಿದರು.

ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಯತ್ನಾಳ್, ¾¾ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಲಿ ಇರುವ ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ ಎಂದರು.

ಏಪ್ರಿಲ್ ಕೊನೆಯ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದರು. ಪಕ್ಷದ ಹೈಕಮಾಂಡ್ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುತ್ತದೆಯೇ ಎಂದು ಪ್ರಶ್ನಿಸಿದಾಗ, ಅಂತಹ ಯಾವುದೇ ನಿರ್ಧಾರದ ಬಗ್ಗೆ ನನಗೆ ತಿಳಿದಿಲ್ಲ ಎಂದು ಯತ್ನಾಳ್ ಹೇಳಿದರು.