ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಗಣ್ಯರ ಭೇಟಿ, ಕುಟುಂಬಕ್ಕೆ ಸಾಂತ್ವನ

Social Share

ಹಾವೇರಿ,ಮಾ.2- ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಉಕ್ರೇನ್‍ನ ಕಾರ್ಕೀವ್‍ನಲ್ಲಿ ನಿನ್ನೆ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ನಿವಾಸಕ್ಕೆ ಅನೇಕ ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಂಗಳೂರು ವಲಯದ ಪಾಸ್‍ಪೋರ್ಟ್ ಅಧಿಕಾರಿ, ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮತ್ತಿತರರು ಆಗಮಿಸಿ ನವೀನ್ ಪೋಷಕರು ಹಾಗೂ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಕರ್ಕೀವ್‍ನಲ್ಲಿರುವ ನವೀನ್ ಮೃತದೇಹವನ್ನು ಹುಟ್ಟೂರಿಗೆ ಕರೆತರಲು ರಾಜತಾಂತ್ರಿಕ ಪ್ರಯತ್ನಗಳು ಮುಂದುವರೆದಿದೆ. ಆದರೆ ಅಲ್ಲಿನ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ವಿಷಮಗೊಳ್ಳುತ್ತಿರುವುದರಿಂದ ನಮ್ಮ ಪ್ರಯತ್ನಗಳು ಫಲ ಕೊಡುತ್ತಿಲ್ಲ ಎಂದು ಪಾಸ್‍ಪೋರ್ಟ್ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಉಕ್ರೇನ್‍ನಲ್ಲಿರುವ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧ್ಯ ಸಿಂಧ್ಯಾ, ಕೇಂದ್ರ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸೇರಿದಂತೆ ಮತ್ತಿತರ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯನ್ನು ಮೃತ ನವೀನ್ ತಂದೆ ಶೇಖರ್ ಗೌಡರ್ ಅವರಿಗೆ ಮಾಹಿತಿ ನೀಡಿದರು.
ನಿನ್ನೆಯಿಂದಲೇ ನಾವು ರಾಯಭಾರಿ ಕಚೇರಿ ಅಧಿಕಾರಿಗಳಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದ್ದೇವೆ. ಅಧಿಕಾರಿಗಳು ಕೂಡ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಮನವಿ ಮಾಡಿಕೊಟ್ಟರು. ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ನವೀನ್ ಮೃತದೇಹವನು ತರಲು ಪ್ರಯತ್ನಿಸುತ್ತಿವೆ. ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ವಸ್ತುಸ್ಥಿತಿಯನ್ನು ಪೆÇೀಷಕರು ಮತ್ತು ಸಂಬಂಧಿಕರಿಗೆ ತಿಳಿಸಿದರು.
ನವೀನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ್ದ. ವೈದ್ಯನಾದ ಮೇಲೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕೆಂಬ ಕನಸು ಕಂಡಿದ್ದ. ಆದರೆ ವಿಧಿಯ ಆಟ ಬೇರೆಯಾಗಿತ್ತು ಎಂದು ವಿಷಾದಿಸಿದರು.
ಈಗಿನ ಸ್ಥಿತಿಯಲ್ಲಿ ನಾವು ಸಾಂತ್ವನ ಹೇಳುವುದನ್ನು ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಾವು ಮೃತದೇಹವನ್ನು ತರಲು ಒತ್ತಡ ಹಾಕಬಹುದು. ಆದರೆ ಉಕ್ರೇನ್‍ನಲ್ಲಿರುವ ರಾಯಭಾರ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯ ಹತ್ತು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಪ್ರಯತ್ನಗಳು ಮುಂದುವರೆದಿದೆ. ವಿದ್ಯಾರ್ಥಿಗಳ ಪ್ರತಿಯೊಂದು ವಿವರಗಳು ನಮ್ಮ ಬಳಿ ಇದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಎಲ್ಲರನ್ನು ಸುರಕ್ಷಿತವಾಗಿ ಕರೆತರುತ್ತೇವೆ. ನಮ್ಮ ಪ್ರಯತ್ನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Articles You Might Like

Share This Article