ವಿದ್ಯಾರ್ಥಿಯನ್ನು ಅಪಹರಿಸುತ್ತಿದ್ದ ನಾಲ್ವರು ಅಪಹರಣಕಾರರ ಬಂಧನ

Social Share

ಬೆಂಗಳೂರು,ಜು.19- ವಿದ್ಯಾರ್ಥಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ನಾಲ್ವರು ಅಪಹರಣಕಾರರನ್ನು ಕಾರಿನ ಸಮೇತ ಚಿತ್ರದುರ್ಗ ಪೊಲೀಸರ ಸಹಾಯದಿಂದ ಯಲಹಂಕ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
ವಿದ್ಯಾರ್ಥಿ ಅಪಹರಣವಾಗಿರುವ ವರದಿ ದಾಖಲಾದ 3 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲಬುರಗಿ ಮೂಲದ ರಮೇಶ್ ರಾಥೋಡ್(43), ರಿಜ್ವಾನ್ ಪಟೇಲ್(23), ಇಂದ್ರಜಿತ್ ಪವಾರ್(23) ಮತ್ತು ಹರೀಶ್‍ಕುಮಾರ್(24) ಬಂಧಿತ ಅಪಹರಣಕಾರರು. ಆರೋಪಿಗಳಿಂದ ಇನ್ನೇವಾ ಕಾರು ಹಾಗೂ ಫಾರ್ಚೂನ್ ಕಾರುಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿ ಜಗದೀಶ್‍ನನ್ನು ರಕ್ಷಿಸಲಾಗಿದೆ.

ಆಂಧ್ರಪ್ರದೇಶ ಮೂಲದ ಜಗದೀಶ್ ನಗರದ ರೇವಾ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಬಾಗಲೂರಿನಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದಾನೆ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಜಗದೀಶ ಕಾಲೇಜು ಮುಗಿಸಿಕೊಂಡು ರೂಮ್‍ಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರು ಅಪಹರಣಕಾರರು ಜಗದೀಶನನ್ನು ಅಡ್ಡಗಟ್ಟಿ ಅಪಹರಿಸಿಕೊಂಡು ಹೋಗುತ್ತಿದ್ದರು.

ಈ ಬಗ್ಗೆ ಯಲಹಂಕ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕಾರು ಯಾವ ಮಾರ್ಗದಲ್ಲಿ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದಾಗ ಚಿತ್ರದುರ್ಗ ಕಡೆ ಸಾಗುತ್ತಿರುವುದು ಕಂಡುಬಂದಿದೆ.

ತಕ್ಷಣ ಚಿತ್ರದುರ್ಗ ಪೊಲೀಸರನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಕ್ಷಣಾರ್ಧದಲ್ಲಿ ಅಲ್ಲಿನ ಪೊಲೀಸರು ಕಾರ್ಯ ಪ್ರವೃತ್ತರಾಗಿ ಜಿಲ್ಲೆಯ ಐಮಂಗಲದ ಬಳಿ ಕಾರನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆದು ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.

ವಿದ್ಯಾರ್ಥಿ ಜಗದೀಶ ಅವರ ತಂದೆ ಉದ್ಯಮಿಯಾಗಿದ್ದು, ಹಣಕಾಸು ವ್ಯವಹಾರ ವಿವಾದಕ್ಕೆ ಸಂಬಂಧಿಸಿದಂತೆ ಅವರನ್ನು ಬೆದರಿಸುವ ಸಲುವಾಗಿ ಮಗನನ್ನು ಅಪಹರಣ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಚಿತ್ರದುರ್ಗ ಎಸ್‍ಪಿ ನೇತೃತ್ವದ ಐಮಂಗಲ ಠಾಣೆ ಪಿಎಸ್‍ಐ ಮಂಜುನಾಥ್ ಅವರನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಚರಣೆ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.

ಯಲಹಂಕ ಠಾಣೆ ಪೊಲೀಸರು ಚಿತ್ರದುರ್ಗಕ್ಕೆ ತೆರಳಿ ಆರೋಪಿಗಳನ್ನು ನಗರಕ್ಕೆ ಕರೆತಂದು ತೀವ್ರ ವಿಚಾರಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article