ತುಮಕೂರು,ಜು.20- ದಿನ ಬೆಳಗಾದರೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೊಂದು ಉದಾರಣೆ ಎಂದರೆ ಹಣದ ಆಸೆಗೆ ಇಲ್ಲೊಬ್ಬ ವಿದ್ಯಾರ್ಥಿ ಸುಮಾರು 6.62 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕಿಟ್ಟಗಳ್ಳಿಯ ವಿದ್ಯಾರ್ಥಿ ಭೀಮ್ ಸೇನ್ ಮೊಬೈಲ್‍ಗೆ ಪ್ರತಿದಿನ 7000 ಸಂಪಾದಿಸುವ ಕೆಲಸ ಖಾಲಿ ಇದೆ ಎಂಬ ಮೆಸೇಜ್ ಬಂದಿದೆ. ಹಣದ ಆಸೆಗೆ ವಿದ್ಯಾರ್ಥಿ ಲಿಂಕ್ ಕ್ಲಿಕ್ ಮಾಡಿದ್ದಾನೆ. ಮೆಸೇಜ್ ಬಂದಿರುವ ಬಗ್ಗೆ ಮನೆಯವರಿಗೆ ತಿಳಿಸಿ ಪೋಷಕರಿಂದ ಹಣ ಪಡೆದಿದ್ದಾನೆ ಎನ್ನಲಾಗಿದೆ.
ನಂತರ ಹಣ ಗಳಿಸಲು ಟಾಸ್ಟ್ ಇದ್ದು, ಟಾಸ್ಟ್ ಪೂರ್ಣಗೊಂಡ ನಂತರ ಹಣ ಸಿಗುವುದಾಗಿ ಟೆಲಿಗ್ರಾಂ ಗ್ರೂಫ್ ನಲ್ಲಿ ತಿಳಿಸಲಾಗಿದೆ. ಮೆಸೇಜ್ ಮೂಲಕ ಬಂದ ಯುಪಿಐ ಐಡಿಗೆ ಹಂತ ಹಂತವಾಗಿ 6.62 ಲಕ್ಷ ಹಣವನ್ನು ಭೀಮ್‍ಸೇನೆ ಹಾಕಿದ್ದಾನೆ.
ಕೊನೆಗೆ ಹಣವನ್ನು ವಾಪಾಸ್ ಪಡೆಯಬೇಕು ಎಂದರೆ ಟ್ಯಾಕ್ಸ್ ಕಟ್ಟಬೇಕು ಎಂದು ಯಾಮಾರಿಸಿದ್ದಾರೆ. ಆಗ ತಾನು ಮೋಸವೋಗಿರುವುದಾಗಿ ತಿಳಿದ ವಿದ್ಯಾರ್ಥಿ ಭೀಮ್‍ಸೇನ್ ಸೈಬರ್ ಠಾಣೆಗೆ ದೂರು ನೀಡಿದ್ದಾನೆ. ಎಫ್‍ಐಆರ್ ಕೂಡ ದಾಖಲಾಗಿದೆ.
ಇತ್ತಿಚೆಗೆ ಜಿಲ್ಲಾಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಎಚ್ಚರಿಕೆಯಿಂದ ಆನ್ ಲೈನ್ ವ್ಯವಹಾರಗಳನ್ನು ಮಾಡಬೇಕಿದೆ ಎಂದು ಸೈಬರ್ ಠಾಣೆ ಇನ್ಸ್‍ಪೆಕ್ಟರ್ ಅವಿನಾಶ್ ಇದೇ ವೇಳೆ ಮನವಿ ಮಾಡಿದ್ದಾರೆ.