ದಸರಾ ಉದ್ಘಾಟನೆಗೆ ಇನ್ಫೋಸಿಸ್ ಸುಧಾಮೂರ್ತಿ ಅವರಿಗೆ ಅಧಿಕೃತ ಆಹ್ವಾನ

Sudha-Murthy--01
ಬೆಂಗಳೂರು, ಅ.3- ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಉದ್ಘಾಟಕರಾದ ಇನ್ಫೋಸಿಸ್ ಫೌಂಡೇಶನ್‍ನ ಸಂಸ್ಥಾಪಕರಾದ ಸುಧಾ ಮೂರ್ತಿ ಅವರಿಗೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನೇತೃತ್ವದ ನಿಯೋಗ ಅಧಿಕೃತ ಆಹ್ವಾನ ನೀಡಿತು. ಇಂದು ಬೆಳಗ್ಗೆ ಸಚಿವರ ನೇತೃತ್ವದ ಜಿಲ್ಲಾ ಮಟ್ಟದ ನಿಯೋಗ ಸುಧಾಮೂರ್ತಿ ಅವರ ನಿವಾಸಕ್ಕೆ ತೆರಳಿ ದಸರಾ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ರೇಷ್ಮೆ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎಚ್. ವಿಶ್ವನಾಥ್, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಮತ್ತಿತರರು ಇದ್ದರು.

#  ಐತಿಹಾಸಿಕ ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಕಳೆಕಟ್ಟುತ್ತಿದ್ದು, ಇದಕ್ಕಾಗಿ ಸಾಂಸ್ಕøತಿಕ ನಗರಿ ನವವಧುವಿನಂತೆ ಸಜ್ಜುಗೊಳುತ್ತಿದೆ. ಪ್ರತಿ ರಸ್ತೆ, ಮರ , ಪಾರಂಪರಿಕ ಕಟ್ಟಡಗಳಗೆ ಹೊಸ ಮೆರಗು ಮೂಡಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ ವಸ್ತುಪ್ರದರ್ಶನ ಮಳಿಗೆ, ಫಲಪುಷ್ಪ ಪ್ರದರ್ಶನಕ್ಕೂ ಎಲ್ಲ ರೀತಿಯ ಸಿದ್ದತೆ ನಡೆಯುತ್ತಿದೆ. ಒಟ್ಟಾರೆ ಮೈಸೂರು, ದಸರಾಕ್ಕಾಗಿ ಅಭಿವೃದ್ದಿ ಸೇರಿದಂತೆ ಇನ್ನಿತರ ಕೆಲಸಗಳನ್ನು ಪೂರೈಸಿಕೊಂಡು ಸಿದ್ದಗೊಳ್ಳುತ್ತಿದೆ.

ನಗರದ ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಅರಮನೆ ಸುತ್ತಮುತ್ತಲಿನ ರಸ್ತೆ ಸೇರಿದಂತೆ ಎಲ್ಲೆಡೆ ಎಲ್‍ಇಡಿ ಬಲ್ಪ್‍ಗಳನ್ನು ಬಳಸಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ಪ್ರತಿ ಮರಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಝಗಮಗಿಸುವ ವಿದ್ಯುತ್ ದೀಪಗಳನ್ನು ಪಾರಂಪರಿಕ ಕಟ್ಟಡಗಳಿಗೂ ಹಾಕಲಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಪಾದಚಾರಿ ರಸ್ತೆಯ ಬದಿಗೆ ಹಳದಿ ಕಪ್ಪು ಬಣ್ಣ ಬಳಿದು ಸಿಂಗಾರಗೊಳಿಸಲಾಗುತ್ತಿದೆ.

ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದೆನಿಸಿದ ಫಲಪುಷ್ಪ ಪ್ರದರ್ಶನಕ್ಕೂ ಸಿದ್ಧತೆ ಭರದಿಂದ ಸಾಗುತ್ತಿದ್ದು, ಈ ಬಾರಿ ಫಲಪುಷ್ಪ ಪ್ರದರ್ಶನದ ಸ್ಥಳದಲ್ಲಿ ಗ್ಲಾಸ್ ಹೌಸ್ ನಿರ್ಮಾಣ ಮಾಡಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಬನ್ನಿಮಂಟಪದಲ್ಲಿ ವಿಜಯದಶಮಿಯಂದು ನಡೆಯುವ ಪಂಜಿನ ಕವಾಯತ್ ವೀಕ್ಷಣೆಗೆ ಬರುವವರಿಗೆ ಆಸನದ ಸಂಖ್ಯೆಯನ್ನು ಹೆಚ್ಚು ಮಾಡಿದ್ದು, ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಗೆ ಬರುವ ಪ್ರೇಕ್ಷಕರಿಗಾಗಿಯೂ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.

ದಸರಾ ಸಂದರ್ಭದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಾಗಿ ನಿನ್ನೆಯಿಂದಲೇ ಜೋಡಿ ಕಟ್ಟುವ ಕಾರ್ಯ ಆರಂಭಿಸಿದ್ದು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು ನಗರಕ್ಕೆ ಆಮಿಸಿದ್ದಾರೆ. ಜಂಬೂ ಸವಾರಿಯ ದಿನ 24 ಕುಶಾಲ ತೋಪುಗಳನ್ನು ಹಾರಿಸುವಾಗ ಆನೆಗಳು ಹಾಗೂ ಅಶ್ವಗಳು ಹೆದರಬಾರದು ಎಂಬ ಕಾರಣಕ್ಕೆ ನಿನ್ನೆಯಿಂದ ಎರಡೂ ಸುತ್ತಿನ ಮದ್ದುಗುಂಡು ಸಿಡಿಸುವ ತಾಲೀಮು ಸಹ ಆರಂಭಿಸಲಾಗಿದ್ದು, ಅರಮನೆಯ ಕೋಟೆ ಮಾರಮ್ಮನ ದೇವಸ್ಥಾನದ ಬಳಿ ತಾಲೀಮು ನಡೆಸಲಾಗಿದೆ.

Sri Raghav

Admin