ಯುಕೆಯಿಂದ ಬಂದ 34 ಪ್ರಯಾಣಿಕರಿಗೆ ಪಾಸಿಟಿವ್ : ಸಚಿವ ಸುಧಾಕರ್

ಬೆಂಗಳೂರು, ಡಿ.31- ರೂಪಾಂತರಗೊಂಡ ಕೊರೊನಾ ವೈರಾಣು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮೋಜು-ಮಸ್ತಿ ಬೇಡ. ಸರಳವಾಗಿ ಮನೆಯಲ್ಲೇ ಆಚರಿಸಿಕೊಳ್ಳಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿ ಕಳೆದ ನಂತರ ಹೊಸ ವರ್ಷಕ್ಕೆ ಕಾಲಿಡುತ್ತೇವೆ.

ಈ ಸಂದರ್ಭದಲ್ಲಿ ಸಮಾರಂಭ, ಪಾರ್ಟಿ ಮಾಡುವುದು ಒಳ್ಳೆಯದಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದು ಬೇಡ. ಈಗಾಗಲೇ ರೂಪಾಂತರಗೊಂಡ ಕೊರೊನಾ ಸೋಂಕು ತೀವ್ರಗತಿಯಲ್ಲಿ ದೇಶ-ವಿದೇಶಗಳಲ್ಲೂ ಹರಡುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸೋಣ. ಕೊರೊನಾ ಇನ್ನೂ ನಮ್ಮನ್ನು ಬಿಟ್ಟು ತೊಲಗಿಲ್ಲ. ಲಸಿಕೆ ಹಾಕಿಸಿಕೊಳ್ಳುವವರೆಗೂ ಜಾಗೃತರಾಗಿರುವುದು ಒಳ್ಳೆಯದು ಎಂದು ಸಲಹೆ ಮಾಡಿದರು.

34 ಮಂದಿಗೆ ಪಾಸಿಟಿವ್: ಯುಕೆಯಿಂದ ಬಂದ 34 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಸಂಪರ್ಕದಲ್ಲಿದ್ದ ನಾಲ್ಕು ಜನರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. 34 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರತರದ ರೋಗ ಸಮಸ್ಯೆ ಕಂಡುಬಂದಿಲ್ಲ ಎಂದು ಸುಧಾಕರ್ ತಿಳಿಸಿದರು. ರೂಪಾಂತರಗೊಂಡ ಕೊರೊನಾ ವೈರಾಣು ಬಿಬಿಎಂಪಿ ವ್ಯಾಪ್ತಿಯ ಮೂರು ಹಾಗೂ ಶಿವಮೊಗ್ಗದ ಏಳು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಮತ್ತೆ ಹೊಸ ಪ್ರಕರಣ ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದೇಶದಿಂದ ಆಗಮಿಸಿದ 199 ಜನರನ್ನು ಪತ್ತೆಹಚ್ಚುವ ಕಾರ್ಯವನ್ನು ಗೃಹ ಇಲಾಖೆ ಮಾಡುತ್ತಿದೆ. ಅವರಲ್ಲಿ 80 ಮಂದಿ ನಮ್ಮ ದೇಶದವರಲ್ಲ. ಅವರನ್ನೂ ಪತ್ತೆಹಚ್ಚುವ ಕೆಲಸವನ್ನು ಗೃಹ ಇಲಾಖೆ ಮಾಡುತ್ತಿದೆ. ಅವರಲ್ಲಿ 24 ಜನ ನಮ್ಮ ದೇಶದವರು. ಗೃಹ ಇಲಾಖೆ ಇಂದು ವಿದೇಶದಿಂದ ಆಗಮಿಸಿರುವ ಪ್ರಯಾಣಿಕರನ್ನು ಪತ್ತೆಹಚ್ಚುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ರಾತ್ರಿ ಕಫ್ರ್ಯೂ ಈಗ ಅಪ್ರಸ್ತುತ. ತಾವು ಹಾಗೂ ಕಂದಾಯ ಸಚಿವ ಅಶೋಕ್ ಅವರು ರಾತ್ರಿ ಕಫ್ರ್ಯೂ ಬಗ್ಗೆ ಪ್ರಸ್ತಾಪಿಸಿದ್ದೆವು. ಅದರಲ್ಲಿ ಗೊಂದಲವಿಲ್ಲ ಎಂದರು.  ತಾಂತ್ರಿಕ ಸಲಹಾ ಸಮಿತಿಯು ರಾತ್ರಿ ಕಫ್ರ್ಯೂ ಜಾರಿ ಬಗ್ಗೆ ಸಲಹೆ ಮಾಡಿತ್ತು. ಆದರೆ, ವಿರೋಧ ಪಕ್ಷದವರು ಸೇರಿದಂತೆ ಕೆಲವರು ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ರಾತ್ರಿ ಕಫ್ರ್ಯೂ ಬೇಡ ಎಂದು ಒತ್ತಾಯಿಸಿದರು. ಹೀಗಾಗಿ ಮುಖ್ಯಮಂತ್ರಿ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ ಎಂದರು.

ರೂಪಾಂತರಗೊಂಡ ವೈರಾಣು ಪತ್ತೆಯಾದವರ ಮನೆ ಅಥವಾ ಅಪಾರ್ಟ್‍ಮೆಂಟ್‍ನ ಸೀಲ್‍ಡೌನ್ ಮಾಡಬೇಕಾಗುತ್ತದೆ. ಏಕೆಂದರೆ ವೈರಾಣು ವೇಗವಾಗಿ ಹರಡುವುದರಿಂದ ವಿಶೇಷ ಕಾಳಜಿ ಅಗತ್ಯ ಎಂದರು.

ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ವಿಚಾರದಲ್ಲಿ ಯಾವುದೇ ದ್ವಂದ್ವ ಇಲ್ಲ. ಮುಖ್ಯಮಂತ್ರಿ ಜತೆ ಗೃಹ ಸಚಿವರು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ನಿರ್ಧಾರವನ್ನು ಬದಲಿಸಿದರೆ ಗೊಂದಲವೆಂದು ಪರಿಗಣಿಸುವುದು ಬೇಡ. ಕಾಲಕಾಲಕ್ಕೆ ಆರೋಗ್ಯ ಇಲಾಖೆ ಸೂಕ್ತ ಸಲಹೆಗಳನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ನೀಡುತ್ತಿದೆ ಎಂದರು.