2-3 ವಾರಗಳ ನಂತರ ಕರ್ನಾಟಕದಲ್ಲಿ ಕೊರೋನಾ ಕಡಿಮೆಯಾಗಲಿದೆ : ಸಚಿವ ಸುಧಾಕರ್

Social Share

ಬೆಂಗಳೂರು,ಜ.23- ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಜ್ಞರ ಪ್ರಕಾರ 2-3 ವಾರಗಳ ನಂತರ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ಇದೇ ರೀತಿ ಸಹಕಾರ ಕೊಟ್ಟರೆ ಆದಷ್ಟು ಶೀಘ್ರವಾಗಿ ಸೋಂಕು ಕಡಿಮೆಯಾಗಲಿದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ವಿ ಇಲ್ಲದೆ ರಾಜ್ಯ ಸರ್ಕಾರ ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದುರು.
ಅನಿವಾರ್ಯ ಕಾರಣಗಳಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಏಕೈಕ ಉದ್ದೇಶಕ್ಕಾಗಿ ವಾರಾಂತ್ಯದ ಲಾಕ್‍ಡೌನ್‍ನನ್ನು ಹಿಂಪಡೆಯಲಾಗಿದೆ. ಜನರು ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಸೋಂಕಿನ ಕಾರಣದಿಂದ ಅದರ ತೀವ್ರತೆ ಹೆಚ್ಚಾದರೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದರು.
ನಮ್ಮ ಸರ್ಕಾರ ಜನರಿಗಾಗಿ ಉತ್ತಮವಾದ ನಿರ್ಧಾರ ತೆಗೆದುಕೊಂಡಿದೆ. ಕೇವಲ ಕಾನೂನಿನಿಂದ ಮಾತ್ರವೇ ಇದನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಜನರ ಸಹಕಾರವೂ ಕೂಡ ಅಷ್ಟೇ ಮುಖ್ಯ. ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದರೆ ಸಾರ್ವಜನಿಕರು ಸರ್ಕಾರಕ್ಕೆ ಸಹಕಾರ ಕೊಡಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ತಜ್ಞರು, ಸಚಿವರು, ಇಲಾಖೆ ಅಕಾರಿಗಳ ಜತೆ ಸಾಕಷ್ಟು ಚರ್ಚಿಸಿ ಅಂತಿಮವಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಜನರಿಗೆ ಜವಾಬ್ದಾರಿಯನ್ನು ನೀಡಿದ್ದೇವೆ. ಅದನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಾರೆ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.
ಮೊದಲನೆ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೆ ಅಲೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಈ ಹಿಂದೆ ಆಸ್ಪತ್ರೆಗೆ ದಾಖಲಾಗುವವರು ಹಾಗೂ ಐಸಿಯು, ಸಾಮಾನ್ಯ ಬೆಡ್‍ಗಳಲ್ಲಿ ಸಮಸ್ಯೆ ಎದುರಾಗಿತ್ತು. ಆದರೆ, ಈಗ ಅಂತಹ ಸಮಸ್ಯೆ ಇಲ್ಲ. ಕೋವಿಡ್ ಸೋಂಕಿನ ತೀವ್ರತೆ ಜನರ ಆರೋಗ್ಯದ ಮೇಲೆ ಕಡಿಮೆ ಬೀರಿದೆ ಎಂದರು.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿನ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ತಜ್ಞರು ಕೂಡ ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಎಂದರು.
ಬೆಂಗಳೂರು ಹೊರತುಪಡಿಸಿದರೆ ಇದೀಗ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲೇ ಈವರೆಗೆ ಶೇ.75ರಿಂದ 80ರಷ್ಟು ಪತ್ತೆಯಾಗುತ್ತಿದ್ದವು. ಆದರೆ, ಈಗ ಬೇರೆ ಬೇರೆ ನಗರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಇದು ಸ್ವಾಭಾವಿಕ ಎಂದು ಹೆಳಿದರು.
ಪಾಸಿಟಿವ್ ಬಂದವರನ್ನು ಮನೆಯಿಂದ ಬರಬೇಡಿ ಎಂದು ಪದೇ ಪದೇ ಮನವಿ ಮಾಡಿಕೊಂಡರೂ ಉಪಯೋಗವಾಗುತ್ತಿಲ್ಲ. ಕೆಲವರು ಅನಗತ್ಯವಾಗಿ ತಿರುಗಾಟ ನಡೆಸುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಲ್ಲದೆ ಕರ್ನಾಟಕ ಐದಾರು ರಾಜ್ಯಗಳ ಜತೆ ಗಡಿಯನ್ನು ಹಂಚಿಕೊಂಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚಾರ ಮಾಡುವುದರಿಂದ ಸೋಂಕು ಹಬ್ಬುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಪಾಸಿಟಿವ್ ಬಂದವರು ಮನೆಯಲ್ಲಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಇದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ. ಪ್ರತಿಯೊಂದು ಕಡೆ ನಾವೇ ನಿಗಾವಹಿಸಬೇಕೆಂದರೆ ಕಷ್ಟಸಾಧ್ಯ. ಜನರಿಗೂ ಇದರ ಬಗ್ಗೆ ಅರಿವಿರಬೇಕು ಎಂದರು.
ಪಾಸಿಟಿವ್ ಕಾಣಿಸಿಕೊಂಡವರು ಕಡೆ ಪಕ್ಷ ಐದಾರು ದಿನ ಮನೆಯಲ್ಲಿದ್ದರೆ ಯಾವ ಸಮಸ್ಯೆಯೂ ಬರುವುದಿಲ್ಲ. ಅನಗತ್ಯವಾಗಿ ತಿರುಗಾಟ ನಡೆಸುವುದರಿಂದ ಯಾವುದಾದರು ರೂಪದಲ್ಲಿ ಸೋಂಕು ಹರಡುತ್ತದೆ. ಸರ್ಕಾರ ಈ ಬಗ್ಗೆ ಎಷ್ಟೇ ಜಾಗೃತಿ, ಅಭಿಯಾನ ನಡೆಸಿದರೂ ಕೆಲವರು ತಿಳಿದುಕೊಳ್ಳುವುದಿಲ್ಲ. ಎಲ್ಲದನ್ನು ಕಾನೂನಿಂದ ಮಾಡಲು ಸಾಧ್ಯವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈವರೆಗೂ ಶೇ.100ರಷ್ಟು ಅರ್ಹ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಶೇ.85ರಷ್ಟು ಎರಡನೆ ಲಸಿಕೆ ಪಡೆದಿದ್ದಾರೆ. ಮಕ್ಕಳಲ್ಲಿ ಶೇ.29ರಷ್ಟು ಟೆಸ್ಟಿಂಗ್ ಮಾಡಲಾಗಿದೆ. ಡಿಸೆಂಬರ್ ನಿಂದ ಜನವರಿವರೆಗೂ ಇಷ್ಟು ಪ್ರಗತಿ ಸಾಸಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಲಸಿಕೆ ಕೊಡುವುದರಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಶೇ.24.25ರಷ್ಟು ಪಾಸಿಟಿವಿಟಿ ದರ ಇತ್ತು. ಈಗ 17,18,19ರಷ್ಟು ಪಾಸಿಟಿವಿಟಿ ದರ ಬರುತ್ತಿದೆ. ನಾಳೆ ಮತ್ತು ನಾಡಿದ್ದು ಇದರ ಪ್ರಮಾಣ ಇನ್ನಷ್ಟು ಇಳಿಕೆಯಾಗುವ ಸಂಭವವಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ಜ.19ರಂದು ಪಾಸಿಟಿವಿಟಿ ದರ ಅತಿ ಹೆಚ್ಚು ಇತ್ತು. ಈಗ ಕಡಿಮೆಯಾಗುತ್ತಿದೆ. ಆದರೆ, ಹೊರ ಜಿಲ್ಲೆಗಳಲ್ಲಿ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಇದೀಗ ಕಡಿಮೆಯಾಗುತ್ತಿದೆ. ನಮ್ಮಲ್ಲೂ ಕೂಡ ಎರಡು, ಮೂರು ವಾರ ಕಡಿಮೆಯಾಗುವ ಸಂಭವವಿದೆ ಎಂದರು.
ಇದುವರೆಗೂ ರಾಜ್ಯದಲ್ಲಿ ಆರು ಕೋಟಿ ಟೆಸ್ಟಿಂಗ್ ನಡೆಸಲಾಗಿದೆ.
ಇಡೀ ದೇಶದಲ್ಲೇ ಇದು ಮೂರನೆ ದೊಡ್ಡ ಸಂಖ್ಯೆ. ಬಹಳಷ್ಟು ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ಮಾಡಿಸಿಲ್ಲ. 5ಟಿ ಬಹಳಷ್ಟು ಉಪಯೋಗವಾಗಿದೆ. ಆದ್ದರಿಂದಲೇ ನಿಯಂತ್ರಣ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯಕಾರ್ಯಕರ್ತರು, ವೈದ್ಯರು ಸೇರಿದಂತೆ ರಾಜ್ಯದಲ್ಲಿ ಶೇ.100ರಷ್ಟು ಮೊದಲ ಡೋಸ್ ಪೂರ್ಣಗೊಂಡಿದೆ. ಇದಕ್ಕೆ ಮುಖ್ಯಮಂತ್ರಿ ಸೇರಿದಂತೆ ಇಲಾಖೆ ಅಕಾರಿಗಳ ಸಹಕಾರ ಕಾರಣ ಎಂದರು.
ತಿರುಗೇಟು: ಕೊರೊನಾ ನಿಯಮಗಳು ಅವೈಜ್ಞಾನಿಕ ಎಂದು ಹೇಳಿರುವ ಕಾಂಗ್ರೆಸ್‍ಗೆ ತಿರುಗೇಟಿ ನೀಡಿದ ಸಚಿವರು, ಸರ್ಕಾರ ವೈಜ್ಞಾನಿಕವಾಗಿಯೇ ಇರುತ್ತದೆ. ಯಾರಾದರೂ ಅವೈಜ್ಞಾನಿಕವಾಗಿ ನಡೆದುಕೊಂಡಿದ್ದರೆ ಅದು ಕಾಂಗ್ರೆಸ್‍ನವರು ಎಂದರು.
ಮೊದಲನೆ ಅಲೆಯಲ್ಲಿ ನೂರು ಕೋವಿಡ್ ಪ್ರಕರಣಗಳು ಬಂದಾಗ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಯಿತು. ಎರಡನೇ ಅಲೆಯಲ್ಲಿ 4ಸಾವಿರ ಪ್ರಕರಣ ಬಂದಾಗಲೂ ಲಾಕ್‍ಡೌನ್ ಮಾಡಲಾಗಿತ್ತು. ಪ್ರಧಾನಿಯವರು ಆರೋಗ್ಯ ವ್ಯವಸ್ಥೆ ಸುಧಾರಿಸಲು ಲಾಕ್‍ಡೌನ್ ಮಾಡಲು ಸೂಚಿಸಿದ್ದರು. ಸರ್ಕಾರ ಇಷ್ಟೆಲ್ಲಾ ಕ್ರಮ ಕೈಗೊಂಡರೂ ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಎಂದು ಹೇಳಿದರು.

Articles You Might Like

Share This Article