ನದಿಗೆ ಹಾರಿ ತಾಯಿ-ಮಗಳ ಆತ್ಮಹತ್ಯೆ..!

ಮೈಸೂರು, ಆ. 26- ಮನೆಯಲ್ಲಿ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ತಾಯಿ-ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.  ತಾಲೂಕಿನ ಬಂಡಿಪಾಳ್ಯ ಗ್ರಾಮದ ಮಂಜುಳಾ(38) ಮತ್ತು ಪುತ್ರಿ ಸೌಮ್ಯ (19) ಮೃತಪಟ್ಟವರು.

ಮಂಜುಳಾ ಅವರ ಪತಿ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದೇ ನೋವಿನಲ್ಲಿ ಮಂಜುಳಾ ಅವರು ದಿನದೂಡುತ್ತಿದ್ದರು. ಈ ನಡುವೆ ಪುತ್ರಿ ಸೌಮ್ಯ ಏಳು ತಿಂಗಳ ಹಿಂದೆಯಷ್ಟೆ ಎಚ್.ಡಿ.ಕೋಟೆ ತಾಲೂಕಿನ ಕಾಡಗೆರೆಯ ಅನ್ಯಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮೈಸೂರಿನಲ್ಲಿ ವಾಸವಾಗಿದ್ದರು.

ಈ ಘಟನೆಯಿಂದ ಮಂಜುಳಾ ಮನನೊಂದಿದ್ದರು, ಏತನ್ಮಧ್ಯೆ ಸೌಮ್ಯ ಪತಿ ಕುಮಾರ್ ವಾರದ ಹಿಂದೆಯಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಮಗಳು ಚಿಕ್ಕವಯಸ್ಸಿನಲ್ಲೇ ವಿಧವೆಯಾದಳು ಎಂದು ನೊಂದು ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು.

ಈ ಎಲ್ಲ ಘಟನೆಗಳಿಂದ ಆಘಾತಕ್ಕೊಳಗಾದ ಮಂಜುಳಾ ಅವರು ಶನಿವಾರ ಮಗಳು ಸೌಮ್ಯಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ದೇವಸ್ಥಾನಕ್ಕೆ ಹೋಗೋಣವೆಂದು ಕರೆದುಕೊಂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಸಂಗಮದ ಬಳಿ ಮೊಬೈಲ್, ಚಪ್ಪಲಿ ಬಿಟ್ಟು ಇಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ತಾಯಿ-ಮಗಳ ಶವ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.