ಸಾಲಗಾರರ ಕಿರುಕುಳ : ಗ್ರಾಪಂ ಸದಸ್ಯ ಆತ್ಮಹತ್ಯೆ

ರಾಯಚೂರು, ಜ.6- ಸಾಲಗಾರರ ಕಿರುಕುಳದಿಂದ ಬೇಸತ್ತ ಗ್ರಾಪಂ ಸದಸ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮರ್ಚಡ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ್ (50) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮಲ್ಲಿಕಾರ್ಜುನ್ ಅವರು ಹಲವರಿಂದ ಸುಮಾರು 7 ಲಕ್ಷ ರೂ.ವರೆಗೂ ಸಾಲಪಡೆದಿದ್ದರು ಎನ್ನಲಾಗಿದೆ.

ಸಾಲದ ಬಡ್ಡಿ ಹಣ ನೀಡುವಂತೆ ಹಲವರು ಒತ್ತಾಯಿಸುತ್ತಿದ್ದರು. ಆರ್ಥಿಕ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದ ಮಲ್ಲಿಕಾರ್ಜುನ್ ಅವರು ಇತ್ತ ಬಡ್ಡಿ ಕಟ್ಟಲೂ ಆಗದೆ ಅಸಲು ತೀರಿಸಲೂ ಆಗದೆ ಮನನೊಂದಿದ್ದರು ಎನ್ನಲಾಗಿದೆ. ಸಾಲಗಾರರಿಗೆ ಹಣ ಹಿಂದಿರುಗಿಸಲಾಗದೆ ಮಲ್ಲಿಕಾಜುನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಸ್ಥಳದಲ್ಲಿ ದೊರೆತ ಡೆತ್‍ನೋಟನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.