ಬೆಂಗಳೂರು,ನ.28-ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಿ ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿರುವ ಬಿಜೆಪಿ, ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಸಚ್ಚಿದಾನಂದ ಮೂರ್ತಿ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಡ್ಯ ಜಿಲ್ಲೆ ಸಂಸದೆ ಸುಮಲತಾ ಅಂಬರೀಶ್ ಅವರ ಬಲಗೈ ಬಂಟ ಎಂದು ಗುರುತಿಸಿಕೊಂಡಿದ್ದ ಸಚ್ಚಿದಾನಂದ ಅವರನ್ನು ಪಕ್ಷದ ಮುಖಂಡರು ಶಾಲು ಹೊದಿಸಿ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಸಚಿವರಾದ ನಾರಾಯಣ ಗೌಡ, ಕೆ.ಗೋಪಾಲಯ್ಯ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನ, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸಚ್ಚಿದಾನಂದ ಮೂರ್ತಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ ಅವರು, ಮಂಡ್ಯ ಜಿಲ್ಲೆಯಲ್ಲಿ ನಾವು ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ತಲೆಕೆಡಿಸಿಕೊಳ್ಳಬೇಡಿ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನಮ್ಮ ಸರ್ಕಾರವೇ ಇದೆ ಎಂದು ಹೇಳಿದರು.
ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು
ಇಡೀ ಭಾರತದಲ್ಲಿ ಒಳ್ಳೆಯ ಪಕ್ಷ ಅಂದರೆ ಅದು ಬಿಜೆಪಿ. ಅದಕ್ಕಾಗಿ ನಾನು ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇನೆ. ಮದ್ದೂರು ಸ್ವಾಮಿ ಸೇರಿದಂತೆ ಹಲವರು ನನ್ನ ಜೊತೆ ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದರು.
ಒಂದೂವರೆ ವರ್ಷದಿಂದ ಸಚ್ಚಿದಾನಂದನಿಗೆ ನಾವು ಗಾಳ ಹಾಕುತ್ತಿದ್ದೀವಿ. ಆದರೆ ಕೊನೆಗೂ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಯೋಗೇಶಣ್ಣ ನೀವು ನಮ್ಮ ಜಿಲ್ಲೆಯವರು ಅಲ್ಲ. ಆದರೆ ನಿಮ್ಮ ನೇತೃತ್ವದಲ್ಲಿ ಹಿಂದೆ ನಾವು ಬಿಜೆಪಿ ಸೇರಿದ್ದೇವೆ ಎಂದರು.
ಮಂಡ್ಯ ಬೇರೆ ಬೇರೆ ಭದ್ರಕೋಟೆ ಯಾಗಿತ್ತು. ಇವತ್ತು ನಮ್ಮ ಜಿಲ್ಲೆಗೆ ದೊಡ್ಡ ಶಕ್ತಿ ಬಂದಂತಾಗಿದೆ. ಮಂಡ್ಯದಲ್ಲಿ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಮಂಡ್ಯದಲ್ಲಿ ಮುಂದೆ 7 ಸೀಟುಗಳನ್ನ ಗೆಲ್ಲುತ್ತೇವೆ. ನಾನು ಇಡೀ ಜಿಲ್ಲೆಯಲ್ಲಿ ಸೇವಕನಾಗಿ ಕಲಸ ಮಾಡುತ್ತೇನೆ. ನಾವು ಯಾರು ಕಾಂಗ್ರೆಸ್, ಜೆಡಿಎಸ್‍ಗೆ ಭಯಪಡುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಮ್ಮ ಜೊತೆ ಬಂದಿದ್ದು ನನಗೆ ಸಂತೋಷವಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಮುಖಂಡರು ಕೇಸರಿ ಶಾಲು ಹಾಕಿರುವುದನ್ನು ನೋಡಿದರೆ ಬಿಜೆಪಿ ವಾತಾವರಣ ಶುರುವಾಗಿದೆ. ಸಚ್ಚಿದಾನಂದ, ಪೈಟರ್ ರವಿ, ಬಾಬು ಇವತ್ತು ಪಕ್ಷ ಸೇರ್ಪಡೆಯಾಗಿದ್ದಾರೆ ಎಂದರು.ಸರ್ಕಾರದ ಯಂತ್ರ ಇನ್ನೂ ಕೆಲಸ ಮಾಡಬೇಕು. ಸರ್ಕಾರ ಜನ ಪರ ಇದೆ ಎಂಬ ಗಟ್ಟಿದ್ವನಿ ಬೇಕು. ಹೆಚ್ಚು ಒತ್ತು ಕೊಟ್ಟಿಲ್ಲ ಇನ್ನೂ ಕಾಲಾವಕಾಶವಿದೆ. ಚುನಾವಣೆಗೆ 6 ತಿಂಗಳ ಸಮಯವಿದೆ. ಈ ವೇಳೆ ಇನ್ನೂ ಒತ್ತು ಕೊಡಿ. ಅಭ್ಯರ್ಥಿಗಳನ್ನು ಗೆಲ್ಲುವುದಕ್ಕೆ ನಾವು ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ತರಲು ಈ ಪ್ರಯತ್ನ ಆಗಿದೆ. ಸಚ್ಚಿದಾನಂದ ಸೇರಿದಂತೆ ಹಲವರ ಸೇರ್ಪಡೆಯಿಂದ ಮಂಡ್ಯ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಹಾಗೂ ಹೊಸ ಸಂಚಲನ ಮೂಡಿಸಿದೆ ಎಂದರು.
ಮಂಡ್ಯದಲ್ಲೀಗ ಪಕ್ಷದಿಂದ ಒಬ್ಬರು ಶಾಸಕರಿದ್ದಾರೆ. ಮುುಂದೆ 7 ಶಾಸಕರು ಬಿಜೆಪಿಯಿಂದ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮತ್ತು ನಾರಾಯಣಗೌಡ ಹಾಗೂ ಪ್ರಯತ್ನದಿಂದ ಕೆಂಪೇಗೌಡ ಪ್ರತಿಮೆಯ ಮಣ್ಣು ಸಂಗ್ರಹ ರಥ ಯಾತ್ರೆ ಯಶಸ್ವಿಯಾಗಿದೆ ಎಂದ ಅವರು, ಈ ಯಾತ್ರೆಯಿಂದ ಮಂಡ್ಯದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಹಿಂದೂತ್ವ ಮತ್ತಷ್ಟು ಹೆಚ್ಚಾಗಲಿದೆ. ಹಿಂದೂತ್ವದ ಆಧಾರದಲ್ಲಿಯೇ ಗೆಲುವು ಸಾಸುತ್ತೇವೆ ಎಂದು ಹೇಳಿದರು.
#SumalataAmbarish, #CloseAssociate, #SachchidanandaMurthy, #JoinBJP, #Mandya,