ಆಕ್ಸಿಜನ್ ಪೂರೈಕೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ

ಬೆಂಗಳೂರು,ಏ.20- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ( ಆಮ್ಲಜನಕ) ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕೇಂದ್ರಕ್ಕೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು, ಕೂಡಲೇ ರಾಜ್ತದ ಬೇಡಿಕೆಗನುಗುಣವಾಗಿ ಆಕ್ಸಿಜನ್ ಒದಗಿಸುವಂತೆ ಒತ್ತಾಯ ಮಾಡಿದ್ದಾರೆ.

ಪ್ರಸ್ತುತ ರಾಜ್ಯಕ್ಕೆ ಕೇಂದ್ರ ಸರ್ಕಾರವು 300 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುತ್ತಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಏಳು ವೈದ್ಯಕೀಯ ಕಾಲೇಜುಗಳಿಂದ ಪ್ರತಿದಿನ 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿದೆ. ನಿನ್ನೆಗೆ ಸರಿಸುಮಾರು 275 ಮೆಟ್ರಿಕ್ ಟನ್ ಆಕ್ಸಿಜನ್ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ.

ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್ ಪಡೆಯಲು ಸಾರ್ವಜನಿಕರು ಎಲ್ಲೆಡೆ ಸರತಿಯಲ್ಲಿ ನಿಂತಿದ್ದಾರೆ. ಹೀಗಾಗಿ ನಮ್ಮ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಒದಗಿಸಲೇಬೇಕೆಂದು ಪತ್ರದಲ್ಲಿ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಒದಗಿಸುತ್ತಿರುವ 300 ಮೆಟ್ರಿಕ್ ಟನ್ ಸಾಲದಾಗಿದೆ. ಕರ್ನಾಟಕ ಈಗಾಗಲೇ ಕೋವಿಡ್ ರೋಗಿಗಳಿಗೆ 279 ಟನ್ ಬಳಸಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ದಿನಕ್ಕೆ 1,100 ಟನ್ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ಆಕ್ಸಿಜನ್ ಹಂಚಿಕೆಯಲ್ಲಿ ಎಡವಿರುವ ರಾಜ್ಯ ಸರ್ಕಾರ ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಸಣ್ಣ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟನ್ನು ಎದುರಿಸಲು ವೈದ್ಯಕೀಯ ದರ್ಜೆಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಆಕ್ಸಿಜನ್ ಸರಬರಾಜು ಮತ್ತು ವಿತರಣೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ 94 ಟ್ಯಾಂಕರ್‍ಗಳಿದ್ದು, ಅವುಗಳಲ್ಲಿ 45 ಆಕ್ಸಿಜನ್ ಸರಬರಾಜು ಮಾಡುತ್ತಿದೆ. ಆಕ್ಸಿಜನ್ ಪೂರೈಕೆಗಾಗಿ ಇನ್ನೂ ಕೆಲವು ಟ್ಯಾಂಕರ್‍ಗಳನ್ನು ಪುನಃ ಅಳವಡಿಸಬಹುದೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದ ಏಳು ಆಕ್ಸಿಜನ್ ಘಟಕಗಳನ್ನು ಹೊಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ನಾಲ್ಕು – ಏರ್ ವಾಟರ್ ಇಂಡಿಯಾ (ಹಿಂದೆ ಲಿಂಡೆ ಇಂಡಿಯಾ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು), ಜೆಎಸ್‍ಡಬ್ಲ್ಯೂ ಇಂಡಸ್ಟ್ರಿಯಲ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್, ಪ್ರಾಕ್ಸೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬಳ್ಳಾರಿ ಆಕ್ಸಿಜನ್ ಕಂಪನಿ, ಯೂನಿವರ್ಸಲ್ ಏರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಭೋರುಕಾ ಗ್ಯಾಸ್ ಲಿಮಿಟೆಡ್ ಬೆಂಗಳೂರಿನಲ್ಲಿವೆ ಮತ್ತು ಪ್ರಾಕ್ಸೇರ್ ಕೊಪ್ಪಲ್‍ನಲ್ಲಿ ಮತ್ತೊಂದು ಸ್ಥಾವರ ಹೊಂದಿದೆ.

ಈ ನಡುವೆ ಕೇಂದ್ರವು ಆಕ್ಸಿಜನ್ ಪೂರೈಕೆಗೆ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿರುವ ಮಹಾರಾಷ್ಟ್ರ, ಕರ್ನಾಟಕದಿಂದ ತನ್ನ ಕೋಟಾ ಆಕ್ಸಿಜನ್ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.