ರಾತ್ರಿಯಿಡೀ ಜಾಗರಣೆ ಮಾಡಿದರೂ ಖರೀದಿಯಾಗದ ರಾಗಿ, ಆಕ್ರೋಶಗೊಂಡ ರೈತರು

Spread the love

ತಿಪಟೂರು, ಏ.26- ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಎರಡನೆ ಬಾರಿಗೆ ರಾಗಿ ಖರೀದಿಯನ್ನು ಪ್ರಾರಂಭಿಸಬೇಕಿದ್ದು, ತಾಂತ್ರಿಕ ತೊಂದರೆಯಿಂದ ಖರೀದಿಸದೆ ಟೋಕನ್ ನೀಡಿದ್ದರಿಂದ ರೈತರು ಆಕ್ರೋಶಗೊಂಡರು. 2021-22ನೆ ಮುಂಗಾರು ಋತುವಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಅನ್ವಯದಂತೆ ಸೋಮವಾರ ನೋಂದಣಿ ಮಾಡಿಸಲು ರೈತರು ಭಾನುವಾರ ರಾತ್ರಿಯಿಂದ ಬಂದು ತಂಗಿದ್ದರು.

ಕಳೆದ ಬಾರಿ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದ ರೈತರಿಗಾಗಿ ಸರ್ಕಾರವು ರಾಜ್ಯದಲ್ಲಿ ಪುನಃ 1.14 ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಆದೇಶ ಹೊರಡಿಸಿತ್ತು. ನಿನ್ನೆ ಬೆಳಿಗ್ಗೆ 9.30ಕ್ಕೆ ಖರೀದಿ ಕೇಂದ್ರದ ಬಳಿಯಲ್ಲಿ ಬಂದ ಅಧಿಕಾರಿಗಳು ನೋಂದಣಿಗೆ ಮುಂದಾದಾಗ ಸರ್ವರ್ ಸಮಸ್ಯೆ ಎದುರಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ತಮ್ಮ ದಾಖಲೆಗಳನ್ನು ಪಡೆದು ಕೂಡಲೇ ನೋಂದಣಿ ಮಾಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಧ್ಯಾಹ್ನದವರಗೆ ಕಾಲಹರಣ ಮಾಡಿದ ಅಧಿಕಾರಿಗಳು ರೈತರ ಆಕ್ರೋಶವನ್ನು ತಡೆದುಕೊಳ್ಳಲಾಗದೆ ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ದಿನಾಂಕ ನಮೂದಿಸಿ ಟೋಕನ್ ವಿತರಣೆ ಮಾಡಿದ್ದಾರೆ. ಇಲ್ಲಿಯವರೆಗೂ ಒಟ್ಟು 800ಕ್ಕೂ ಅಧಿಕ ಟೋಕನ್ ನೀಡಲಾಗಿದ್ದು, ತಾಂತ್ರಿಕ ತೊಂದರೆ ಯಾವಾಗ ಬಗೆಹರಿಯುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

# ತಾಂತ್ರಿಕ ಸಮಸ್ಯೆ- ಧಿಕ್ಕಾರ ಕೂಗಿದ ರೈತರು:
ನಗರದ ಎಪಿಎಂಸಿ ಆವರಣದಲ್ಲಿ ನಿನ್ನೆ ಸಾವಿರಾರು ಮಂದಿ ರೈತರು ನೋಂದಣಿಗಾಗಿ ದಾಖಲೆ ಸಮೇತವಾಗಿ ತಡರಾತ್ರಿಯಿಂದಲೇ ಬಂದು ಕುಳಿತಿದ್ದರು. ಬಂದವರು ಸರದಿ ಸಾಲಿಗಾಗಿ ಕಲ್ಲು, ಚಪ್ಪಲಿ, ಬ್ಯಾಗ್, ಜೊತೆಗೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಕಾದು ಕುಳಿತಿದ್ದರು. ಆದರೆ, ಬೆಳಿಗ್ಗೆ ಸರ್ವರ್ ಸಮಸ್ಯೆ ಎದುರಾದ ತಕ್ಷಣವೇ ರೈತರು ತಾಳ್ಮೆ ಕಳೆದುಕೊಂಡು ಪ್ರತಿಭಟನೆಗೆ ಮುಂದಾಗಿದ್ದು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

ಭಾನುವಾರ ರಾತ್ರಿ ಊಟ ಮುಗಿಸಿಕೊಂಡು ಗ್ರಾಮದ ಐವರು ರೈತರು ಬಂದು ಸರದಿ ಸಾಲಿಗೆ ಕಲ್ಲು ಜೋಡಿಸಿ ಸಂಖ್ಯೆ ಬರೆದಿದ್ದೆವು. ರಾತ್ರಿಯೇ ನೂರಕ್ಕೂ ಅಧಿಕ ಮಂದಿ ನಮ್ಮಂತೆಯೇ ಬಂದು ತಂಗಿದ್ದರು. ಇದೀಗ ಸಮಸ್ಯೆ ಎಂದು ಟೋಕನ್ ನೀಡುತ್ತಿದ್ದಾರೆ. ನಮ್ಮ ಸಮಸ್ಯೆ, ಶ್ರಮ ಎಲ್ಲಾ ವ್ಯರ್ಥವಾಗಿದೆ ಎಂದು ರೈತ ರಂಗಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ತಾಂತ್ರಿಕ ಸಮಸ್ಯೆಯಿಂದಾಗಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಬಂದ ಎಲ್ಲಾ ರೈತರಿಗೂ ಟೋಕನ್ ವಿತರಣೆ ಮಾಡಿದ್ದು, ನಂತರದಲ್ಲಿ ಆನ್‍ಲೈನ್ ನೋಂದಣಿ ಮಾಡಿಕೊಳ್ಳಲಾಗುವುದು. ಸಮಸ್ಯೆ ಸಂಜೆ ಒಳಗಾಗಿ ಸರಿಪಡಿಸುವ ಭರವಸೆ ನೀಡಿದ್ದು, ರೈತರು ಸಹಕರಿಸಬೇಕು ಎಂದು ತಹಸೀಲ್ದಾರ್ ಆರ್.ಜೆ.ಚಂದ್ರಶೇಖರ್ ಮನವಿ ಮಾಡಿದರು.

Facebook Comments