ಹಿಜಾಬ್ ವಿವಾದಕ್ಕೆ ಮತ್ತೆ ಮರುಜೀವ, ವಿಚಾರಣೆಗೆ ಸುಪ್ರೀಂ ಅಸ್ತು

Social Share

ನವದೆಹಲಿ, ಜು.13- ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಸುಪ್ರೀಂಕೋರ್ಟ್, ಮುಂದಿನ ವಾರ ಸೂಕ್ತ ಪೀಠದಲ್ಲಿ ವಿಚಾರಣೆಗೆ ಪಟ್ಟಿ ಮಾಡುವುದಾಗಿ ತಿಳಿಸಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಪೀಠ ಸಮ್ಮತಿಸಿದೆ.

ಶಾಲೆಗಳಲ್ಲಿ ಸಮವಸ್ತ್ರದ ವಿವಾದ ತೀವ್ರವಾಗಿ ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಭಾರೀ ಚರ್ಚೆ, ಪ್ರತಿಭಟನೆ, ವಾದ ವಿವಾದ ನಡೆದಿದ್ದವು. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಉಡುಪಿ ಜಿಲ್ಲೆಯ ಕೆಲ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಪ್ರತಿಭಟನೆಯ ಕಾವು ಏರುತ್ತಿದ್ದಂತೆ ರಾಜ್ಯ ಶಿಕ್ಷಣ ಇಲಾಖೆ ಫೆಬ್ರವರಿ 5ರಂದು ಆದೇಶ ಹೊರಡಿಸಿ, ಶಾಲಾಭಿವೃದ್ಧಿ ಸಮಿತಿಗಳು ನಿರ್ಧರಿಸಿದ ಸಮವಸ್ತ್ರವನ್ನೆ ವಿದ್ಯಾರ್ಥಿಗಳು ಅನುಸರಿಸಬೇಕು ಎಂದಿತ್ತು.

ವಿದ್ಯಾರ್ಥಿನಿಯರು ಈ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಇಸ್ಲಾಂನಲ್ಲಿ ಹಿಜಾಬ್ ಧಾರಣೆ ಅಭ್ಯಾಸ ಜಾರಿಯಲ್ಲಿದೆ ಎಂದು ವಿದ್ಯಾರ್ಥಿನಿಯರ ಪರ ವಕೀಲರು ವಾದಿಸಿದ್ದರು. ಮೊದಲು ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದು, ನಂತರ ತ್ರೀಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆದು ಮಾರ್ಚ್ 15ರಂದು ತೀರ್ಪು ಪ್ರಕಟವಾಗಿತ್ತು.

ಹಿಜಾಬ್ ಧಾರಣೆ ಇಸ್ಲಾಂನ ಆಚರಣೆಯ ಅಭ್ಯಾಸಗಳಲ್ಲಿ ಕಡ್ಡಾಯವಾಗಿಲ್ಲ ಎಂದು ಅಭಿಪ್ರಾಯ ಪಟ್ಟ ಹೈಕೋರ್ಟ್ ವಿದ್ಯಾರ್ಥಿನಿಯರ ಅರ್ಜಿಯನ್ನು ವಜಾಗೊಳಿಸಿ, ಶಾಲೆಗಳಲ್ಲಿ ನಿಗದಿತ ಸಮವಸ್ತ್ರ ನೀತಿಯನ್ನು ಪಾಲನೆ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

ಇಂದು ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿಗಳ ಪೀಠದ ಮುಂದೆ ವಾದ ಮಂಡಿಸಿದ್ದ ಪ್ರಶಾಂತ್ ಭೂಷಣ್, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾರ್ಚ್‍ನಲ್ಲೇ ಮೇಲ್ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ವಿಚಾರಣೆಗೆ ಅದು ವಿಷಯ ಪಟ್ಟಿ ಸೇರ್ಪಡೆಯಾಗಿಲ್ಲ ಎಂದು ಗಮನ ಸೆಳೆದರು. ಅದಕ್ಕೆ ಸ್ಪಂದಿಸಿದ ಮುಖ್ಯನ್ಯಾಯಮೂರ್ತಿಗಳು ಮುಂದಿನ ವಾದ ಸೂಕ್ತ ಪೀಠದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.

Articles You Might Like

Share This Article