ರಾಜ್ಯ ಹೈಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಗಳ ಮುಖ್ಯನ್ಯಾಯಧೀಶರನ್ನಾಗಿ ನೇಮಿಸಲು ಮನವಿ

ಬೆಂಗಳೂರು, ಆ.19- ಕರ್ನಾಟಕದ ಹೈಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳನ್ನು ಶೀಘ್ರವೇ ಬೇರೆ ರಾಜ್ಯಗಳ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮನವಿ ಮಾಡಿದ್ದಾರೆ.

ಕರ್ನಾಟಕದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜ್ಜಿಯಂ ಶಿಫಾರಸ್ಸು ಮಾಡಿದೆ ಎಂದು ವರದಿಯಾಗಿರುವ ಈ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಎ.ಪಿ.ರಂಗನಾಥ್ ಅವರು, ಕೊಲಿಜ್ಜಿಯಂನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕರ್ನಾಟಕದ ಇಬ್ಬರು ನ್ಯಾಯಾಧೀಶರ ಹೆಸರನ್ನು ಶಿಫಾರಸ್ಸು ಮಾಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಮೂವರು ಮಹಿಳಾ ನ್ಯಾಯಾಧೀಶರ ಹೆಸರನ್ನು ಶಿಫಾರಸ್ಸು ಮಾಡುವ ಮೂಲಕ ಕೊಲಿಜ್ಜಿಯಂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಅದರಲ್ಲೂ ಕರ್ನಾಟಕ ರಾಜ್ಯದಿಂದ ಈ ಮೊದಲು ಹಲವಾರು ಮಂದಿ ನ್ಯಾಯಾಧೀಶರು ಸುಪ್ರೀಂಕೋರ್ಟ್‍ನಲ್ಲಿ ಸೇವೆ ಸಲ್ಲಿಸಿ ಉತ್ತಮ ಹೆಸರು ಪಡೆದಿದ್ದಾರೆ. ಈಗ ಮಹಿಳಾ ನ್ಯಾಯಾಧೀಶರ ಹೆಸರು ಶಿಫಾರಸ್ಸುಗೊಂಡಿರುವುದು ನಾಡಿನ ಹೆಮ್ಮೆಯ ವಿಷಯವಾಗಿದೆ. ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಓಕಾ ಅವರು ಕೂಡ ಅತ್ಯುತ್ತಮ ನ್ಯಾಯಾಧೀಶರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.