ಕ್ರಿಮಿನಲ್ ರಾಜಕಾರಣಗಳ ವಿರುದ್ಧ ತ್ವರಿತ ವಿಚಾರಣೆಗೆ ಸುಪ್ರೀಂ ಭರವಸೆ

Social Share

ನವದೆಹಲಿ, ಫೆ.9- ಜನಪ್ರತಿನಿಗಳ ವಿರುದ್ಧ ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ನ್ಯಾಯ ವಿಚಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಸುಪ್ರಿಂಕೋರ್ಟ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ಅವರು ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಭರವಸೆ ನೀಡಿತ್ತು.
ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಮತ್ತು ಎಂಎಲ್‍ಸಿಗಳ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ವಿವರಗಳನ್ನು ನೀಡುವ ಹೊಸ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ತುರ್ತು, ಕಠಿಣ ಕ್ರಮಗಳ ಅಗತ್ಯವಿದೆ ಎಂದು ಹನ್ಸಾರಿಯಾ ಹೇಳಿದರು.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಹಿಮಾಕೊಹ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಪರಿಶೀಲನೆ ನಡೆಸುವ ಭರವಸೆ ನೀಡಿದೆ. ಇತ್ತೀಚಿನ ವರದಿಯ ಪ್ರಕಾರ ಸಂಸತ್ ಸದಸ್ಯರು, ವಿಧಾನಸಭೆ-ಪರಿಷತ್ತಿನ ಸದಸ್ಯರ ವಿರುದ್ಧ ಒಟ್ಟು 4,984 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಅವುಗಳಲ್ಲಿ 1,899 ಪ್ರಕರಣಗಳು ಐದು ವರ್ಷಕ್ಕಿಂತ ಹಳೆಯವು. 2018ರ ಡಿಸೆಂಬರ್ ವೇಳೆಗೆ ಬಾಕಿ ಉಳಿದಿರುವ ಒಟ್ಟು ಪ್ರಕರಣಗಳ ಸಂಖ್ಯೆ 4,110. 2020ರ ಅಕ್ಟೋಬರ್ ವೇಳೆಗೆ ಈ ಸಂಖ್ಯೆ 4,859 ಆಗಿತ್ತು ಎಂದು ವರದಿ ಹೇಳಿದೆ.
2018ರ ಡಿಸೆಂಬರ್ 4,ರಂದು 2775 ಪ್ರಕರಣಗಳನ್ನು ವಿಲೇವಾರಿ ಮಾಡಿದ ನಂತರವೂ ಪ್ರಕರಣಗಳ ಸಂಖ್ಯೆ 4,122 ರಿಂದ 4,984 ಕ್ಕೆ ಏರಿದೆ. ಇದು ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವುದನ್ನು ತೋರಿಸುತ್ತದೆ. ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ತುರ್ತು ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವಕೀಲೆ ಸ್ನೇಹಾ ಕಲಿತಾ ಅವರ ಮೂಲಕ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಸಿಬಿಐ ಮತ್ತು ಇತರ ಏಜೆನ್ಸಿಗಳಿಂದ ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುತ್ತಿದೆ. ಹೈಕೋರ್ಟ್‍ಗಳು ಸಲ್ಲಿಸಿರುವ ಸ್ಥಿತಿ ವರದಿಯು ಕೆಲವು ರಾಜ್ಯಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ. ಆಯಾ ನ್ಯಾಯಾಲಯಗಳು ಕಾಲ ಕಾಲಕ್ಕೆ ನೀಡಿದ ನಿರ್ದೇಶನಗಳ ಪ್ರಕಾರ ವಿಚಾರಣೆಗಳು ನಡೆಯುತ್ತಿವೆ ಎಂದು ಹನ್ಸಾರಿಯಾ ಹೇಳಿದ್ದಾರೆ.

Articles You Might Like

Share This Article