ನವದೆಹಲಿ, ಫೆ.10- ಶಾಲಾ ಕಾಲೇಜ್‍ಗಳಲ್ಲಿ ಹಿಜಾಬ್ ಧರಿಸುವ ವಿವಾದ ಕುರಿತು ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ತೀವ್ರ ಕುತೂಹಲ ಸೃಷ್ಟಿಯಾಗಿದ್ದು, ಈ ನಡುವೆ ಸುಪ್ರಿಂ ಕೋರ್ಟ್‍ನಲ್ಲೂ ವಿಷಯ ಪ್ರಸ್ತಾಪವಾಗಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿವಿಧ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ನಿನ್ನೆ ಹೈಕೋರ್ಟ್‍ನ ನ್ಯಾಯಮೂರ್ತಿ ಕೃಷ್ಣ ಎಸ್. ದಿಕ್ಷಿತ್ ಅವರು ಎರಡು ದಿನಗಳ ಕಾಲ ವಿಚಾರಣೆ ನಡೆಸಿದರು.
ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಸರ್ಕಾರದ ಪರವಾಗಿ ವಾದಿಸಿದ ಅಡ್ವೋಕೆಟ್ ಜನರಲ್ ಅವರು ಮಧ್ಯಂತರ ಆದೇಶಕ್ಕೆ ವಿರೋಧ ವ್ಯಕ್ತ ಪಡಿಸಿದರು. ವಾದ ವಿವಾದಗಳು ತೀವ್ರಗೊಂಡಾಗ ಮಧ್ಯಂತರ ಆದೇಶ ನೀಡಲು ನಿರಾಕರಿಸಿದರು. ಪ್ರಕರಣ ವಿಸ್ತತ ಪೀಠದಲ್ಲಿ ವಿಚಾರಣೆಗೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಅದರ ಪ್ರಕಾರ ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ತುರ್ತು ವಿಚಾರಣೆಯ ದೃಷ್ಟಿಯಿಂದ ತಮ್ಮನ್ನು ಒಳಗೊಂಡಂತೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ನ್ಯಾಯಮೂರ್ತಿ ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವನ್ನು ರಚಿಸಿದ್ದಾರೆ. ಇಂದು ಈ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯಲಿದೆ.
ಈ ನಡುವೆ ಹಿರಿಯ ವಕೀಲ ಕಪಿಲ್ ಸಿಬಾಲ್ ಅವರು ಸುಪ್ರಿಂ ಕೋರ್ಟ್‍ನಲ್ಲಿ ಮುಖ್ಯನ್ಯಾಯಮೂರ್ತಿಗಳ ಪೀಠದ ಮುಂದೆ ಮನವಿ ಸಲ್ಲಿಸಿದ್ದು, ಹಿಜಾಬ್ ವಿವಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‍ನಿಂದ ಸುಪ್ರೀಂ ಕೋರ್ಟ್‍ಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಹಿಜಾಬ್ ಗಲಾಟೆ ತೀವ್ರವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ವಿದ್ಯಾರ್ಥಿನಿಯರ ಮೇಲೆ ಕಲ್ಲು ಎಸೆಯಲಾಗುತ್ತಿದೆ. ವಿಷಯ ಗಂಭೀರತೆ ಪಡೆದುಕೊಂಡಿದೆ. ಹಾಗಾಗಿ ಹೈಕೋರ್ಟ್ ಬದಲಾಗಿ ಸುಪ್ರಿಂ ಕೋರ್ಟ್‍ನ ಒಂಬತ್ತು ಸದಸ್ಯರ ಸಾಂವಿಧಾನಾತ್ಮಕ ಪೀಠ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ನಾವು ತಕ್ಷಣಕ್ಕೆ ಯಾವುದೇ ಆದೇಶವನ್ನು ಬಯಸುವುದಿಲ್ಲ. ಬದಲಾಗಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರಿಂಕೋರ್ಟ್ ವಿಷಯ ಪಟ್ಟಿಯಲ್ಲಿ ಅರ್ಜಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಆದರೆ ಪ್ರಕರಣ ಸದ್ಯಕ್ಕೆ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಏನು ನಡೆಯಲಿದೆ ಎಂಬುದನ್ನು ಗಮನಿಸುವುದು ಸೂಕ್ತ ಎಂದಿರುವ ಸುಪ್ರಿಂಕೋರ್ಟ್‍ನ ಮುಖ್ಯನ್ಯಾಯಾಮೂರ್ತಿ ಎನ್.ವಿ.ರಮಣ, ಕಪಿಲ್ ಸಿಬಾಲ್ ಮನವಿಯನ್ನೂ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಈ ನಡುವೆ ಹೈಕೋರ್ಟ್ ಪೂರ್ಣ ಪೀಠ ರಚನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ನಿನ್ನೆ ಸಭೆಗಳನ್ನು ನಡೆಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರಲು ಆರಂಭಿಸಿದಾಗ ಹಿಜಾಬ್ ಗಲಾಟೆ ಆರಂಭವಾಯಿತು. ಇದನ್ನು ವಿರೋಸಿ ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರಲಾರಂಭಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿನ ಇತರ ಶಿಕ್ಷಣ ಸಂಸ್ಥೆಗಳಿಗೆ ವ್ಯಾಪಿಸಿ, ಪ್ರತಿಭಟನೆಗಳು, ಹಿಂಸಾತ್ಮಕ ಘಟನೆಗಳು ನಡೆದಿವೆ. ಉದ್ವಿಗ್ನತೆ ಹೆಚ್ಚಾಗಿದ್ದರಿಂದ ರಾಜ್ಯದ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ.
