ಬ್ರೇಕಿಂಗ್ : ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಭಿನ್ನ ತೀರ್ಪು

Social Share

ನವದೆಹಲಿ, ಅ.13- ವಿವಾದಿತ ಹಿಜಾಬ್ ಪ್ರಕರಣ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಭಿನ್ನ ತೀರ್ಪನ್ನು ನೀಡಿದ್ದು, ಮತ್ತಷ್ಟು ವಿಶ್ಲೇಷಣೆಗಾಗಿ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಇಂದು ಬೆಳಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ಒಳಗೊಂಡ ತೀರ್ಪನ್ನು ಪ್ರಕಟಿಸಿದೆ. ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಹಿನ್ನೆಲೆಯಲ್ಲಿ ಹಿಜಾಬ್ ಗೊಂದಲ ಮುಂದುವರೆದಿದ್ದು, ಸ್ಪಷ್ಟನೆಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ದಾಟಿಸಲಾಗಿದೆ.

ಹೇಮಂತ್ ಗುಪ್ತಾ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸುವ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಸುಧಾಂಶು ದುಲಿಯಾ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದ್ದಾರೆ. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಸುಧಾಂಶು ದುಲಿಯಾ ಅವರು, ಹಿಜಾಬ್ ಇಸ್ಲಾಂನ ಧಾರ್ಮಿಕ ಆಚರಣೆಯಲ್ಲಿ ಕಡ್ಡಾಯವೇ ಅಥವಾ ಇಲ್ಲವೇ ಎಂಬುದು ಈ ಪ್ರಕರಣದಲ್ಲಿ ಅನಗತ್ಯ.

ಹೈಕೋರ್ಟ್ ತಪ್ಪು ದಾರಿ ಹಿಡಿದಂತಿದೆ. ಅಂತಿಮವಾಗಿ ಈ ವಿಷಯ ಸಂವಿಧಾನದ ಕಲಂ 14 ಮತ್ತು 19ರ ಅನುಸಾರ ಆಯ್ಕೆಯ ವಿಷಯವಾಗಿದೆ. ಇದಕ್ಕಿಂತ ಹೆಚ್ಚಿಲ್ಲ ಮತ್ತು ಕಡಿಮೆಯೂ ಇಲ್ಲ ಎಂದಿದ್ದಾರೆ.

ಹಿಜಾಬ್ ಎಂಬುದು ಆಯ್ಕೆಯ ವಿಷಯವಾಗಿದೆ. ಗ್ರಾಮೀಣ ಭಾರತದ ಹೆಣ್ಣು ಮಕ್ಕಳು ಈಗಾಗಲೇ ಹಲವು ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ನನ್ನ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆ ಏನಂದರೆ ಆಕೆಯ ಜೀವನವನ್ನು ಮತ್ತಷ್ಟು ಕಠಿಣಗೊಳಿಸಬೇಕೇ ? ಎಂಬುದು. ಪ್ರಮುಖ ಪ್ರಶ್ನೆ ಎಂದರೆ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ರಕ್ಷಿಸುವುದು. ಹೀಗಾಗಿ ಫೆಬ್ರವರಿ 5ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸಮವಸ್ತ್ರ ಕುರಿತ ಆದೇಶವನ್ನು ರದ್ದುಗೊಳಿಸುತ್ತಿದ್ದೇನೆ. ಆದೇಶದ ಬೆನ್ನಲ್ಲೇ ಜಾರಿಯಾಗಿದ್ದ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ತೀರ್ಪನ್ನು ಎತ್ತಿ ಹಿಡಿದಿರುವ ಹೇಮಂತ್ ಗುಪ್ತಾ, ಕರ್ನಾಟಕ ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 26 ಮೇಲ್ಮನವಿಗಳನ್ನು ತಿರಸ್ಕರಿಸಿದ್ದಾರೆ. ಜೊತೆ ಹಿಜಾಬ್ ಇಸ್ಲಾಂನ ಮೂಲಭೂತ ಆಚರಣೆಯಲ್ಲಿ ಕಡ್ಡಾಯವಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೆಧಿಸಿರುವ ರಾಜ್ಯ ಸರ್ಕಾರದ ಆದೇಶದಕ್ಕೆ ಬೆಂಬಲ ಸೂಚಿಸಿದ್ದಾರೆ.

ಮುಂದುವರೆದ ನ್ಯಾಯಮೂರ್ತಿ ಗುಪ್ತಾ, ಹಿಜಾಬ್ ಮೂಲಭೂತ ಹಕ್ಕುಗಳ ಎಂಬುದು ಸ್ವೀಕಾರ್ಹವೇ, ಖಾಸಗಿ ಹಕ್ಕಿಗೆ ಧಕ್ಕೆಯಾಗಲಿದೆಯೇ ? ಸರ್ಕಾರದ ಆದೇಶ ರಾಜ್ಯ ಶಿಕ್ಷಣ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತದೆಯೇ ? ಇದು ಜಾತ್ಯತೀತ ನೆಲೆಗೆ ಭಂಗವಾಗಲಿದೆಯೇ ? ಎಂಬುವು ಸೇರಿದಂತೆ 11 ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.

ಹಿನ್ನೆಲೆ: ಕಳೆದ ವರ್ಷ ಡಿಸೆಂಬರ್‍ನಲ್ಲಿ ಕರಾವಳಿ ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ವಿರೋಧ ವ್ಯಕ್ತವಾಯಿತು. ನಿಧಾನಕ್ಕೆ ಬೆಳೆದ ವಿವಾದ ಜನವರಿ ಅಂತ್ಯಭಾಗಕ್ಕೆ ಕಾಡ್ಗಿಚ್ಚಾಗಿತ್ತು. ರಾಜ್ಯ ಸರ್ಕಾರ ಫೆಬ್ರವರಿ 5ರಂದು ಆದೇಶವೊಂದನ್ನು ಹೊರಡಿಸಿ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಆಚರಣೆಗಳನ್ನು ಸೂಚಿಸುವ ಚಿನ್ನೆಗಳನ್ನೊಳಗೊಂಡ ಉಡುಪು ಧರಿಸುವಂತಿಲ್ಲ ಎಂದು ತಿಳಿಸಿತ್ತು.

ಇದನ್ನು ಪ್ರಶ್ನಿಸಿ ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲು ಏರಿದರು. ಮೊದಲು ವಿಚಾರಣೆ ನಡೆಸಿದ ಏಕಸದಸ್ಯ ಪೀಠ ತೀರ್ಪು ನೀಡದೆ, ತ್ರೀಸದಸ್ಯ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿತ್ತು. ಅಂತಿಮವಾಗಿ ಮಾರ್ಚ್ 15ರಂದು ತೀರ್ಪು ನೀಡಿದ್ದ ಹೈಕೋರ್ಟ್, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದಲ್ಲದೆ, ಹಿಜಾಬ್ ಕಡ್ಡಾಯ ಧಾರ್ಮಿಕ ಸ್ವಾತಂತ್ರ್ಯವಲ್ಲ ಎಂದು ಅಭಿಪ್ರಾಯ ಪಟ್ಟಿತ್ತು.

Articles You Might Like

Share This Article