ನವದೆಹಲಿ, ಜು.27- ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಆರೋಪಿಗಳ ಬಂಧನ, ಆಸ್ತಿ ಜಪ್ತಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಾರಿ ನಿರ್ದೇಶನಾಲಯ ಹೊಂದಿರುವ ಅಧಿಕಾರಗಳನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಈ ಮೂಲಕ ದೇಶದಲ್ಲಿ ಅಕ್ರಮ ಆಸ್ತಿ ಗಳಿಸಿದವರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಆನೆ ಬಲ ಬಂದಂತಾಗಿದೆ.
ಜುಲೈ 29ಕೆ ನಿವೃತ್ತರಾಗಲಿರುವ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಎ.ಎಂ.ಖನ್ವಾಲಿಕರ್ ಅವರ ನೇತೃತ್ವದ ಸಿ.ಟಿ.ರವಿಕುಮರ್, ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹಲವು ಅರ್ಜಿಗಳ ಗುಚ್ಚದ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಜಾರಿ ನಿರ್ದೇಶನಾಲಯ ಇತ್ತೀಚೆಗೆ ನಡೆಸುತ್ತಿರುವ ಪ್ರಕರಣಗಳ ಕುರಿತು ಆಕ್ಷೇಪಗಳಿವೆ. ಹಲವು ರಾಜಕಾರಣಿಗಳು, ಉದ್ಯಮಿಗಳು ಪ್ರಿವೇಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ ಅಡಿ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಎಲ್ಲಾ ಅರ್ಜಿಗಳನ್ನೂ ಒಗ್ಗೂಡಿಸಿ ಸುಪ್ರೀಂಕೋರ್ಟ್‍ನ ಪೀಠದಲ್ಲಿ ವಿಚಾರಣೆ ನಡೆಸಲಾಗಿತ್ತು. ಹಿರಿಯ ವಕೀಲರಾದ ಕಪಿಲ್ ಸಿಬಾಲ್, ಅಭಿಷೇಕ್ ಮನುಸಿಂಘ್ವಿ ಸೇರಿದಂತೆ ಅನೇಕ ಹಿರಿಯ ವಕೀಲರು ನ್ಯಾಯಾಲಯದಲ್ಲಿ ಹಾಜರಿದ್ದರು.
ತನ್ನ ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿಗಳು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವ, ಸಮನ್ಸ್ ನೀಡುವ ಮತ್ತು ಆಸ್ತಿ ಜಪ್ತಿ ಮಾಡುವ ಅಧಿಕಾರ ಹೊಂದಿದೆ ಎಂದು ತೀರ್ಪು ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ.