ನವದೆಹಲಿ,ಫೆ.8- ಕಾವೇರಿನದಿಯ ಕೆಳಭಾಗದಲ್ಲಿ ತಮಿಳುನಾಡು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಗುಂಡಾರು ವೈಗರ್ ಮತ್ತು ಹೈಡ್ರೋ ಪ್ರಾಜೆಕ್ಟ್ ಯೋಜನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಕಾನೂನು ತಜ್ಞರು ಮತ್ತು ನೀರಾವರಿ ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನಿಯಂತ್ರಣ ಪ್ರಾಧಿಕಾರದಲ್ಲಿ ಚರ್ಚೆಯಾಗದೆ ತಮಿಳುನಾಡು ಸರ್ಕಾರ ಈ ಎರಡು ಯೋಜನೆಗಳನ್ನು ಆರಂಭಿಸಲು ಮುಂದಾಗಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
ಗುಂಡಾರು ವೈಗರ್ ಮತ್ತು ಹೈಡ್ರೋ ಪ್ರಾಜೆಕ್ಟ್ ಯೋಜನೆಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಲಿದೆ ಎಂದರು.
ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಯೋಜನೆಯ ಮೇಕೆದಾಟು ಯೋಜನೆಗೆ ಶೀಘ್ರದಲ್ಲೇ ಅನುಮತಿ ನೀಡಬೇಕೆಂಬ ರಾಜ್ಯ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಯೋಜನೆಯು ಕೂಡ ಚರ್ಚೆಯಾಗಬೇಕು. ಸದ್ಯದಲ್ಲೇ ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಯೋಜನೆಗೆ ಅನುಮತಿ ನೀಡುವಂತೆ ಕೋರುವುದಾಗಿ ತಿಳಿಸಿದರು.
ಮಹದಾಯಿ ನದಿ ಯೋಜನೆ ಕೂಡ ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಇದನ್ನು ಅನುಷ್ಠಾನ ಮಾಡಲು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡಲಿದ್ದೇವೆ. ಗೋವಾ ಸರ್ಕಾರದ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನ್ಯಾಯಾಲಯದಲ್ಲಿ ಶೀಘ್ರದಲ್ಲೇ ಇದರ ವಿಚಾರಣೆ ನಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಮಹದಾಯಿ ಯೋಜನೆ ಬಗ್ಗೆ ನ್ಯಾಯಾೀಕರಣ ವಿಸ್ತೃತ ಯೋಜನಾ ವರದಿಯ ಬಗ್ಗೆ ಸ್ಪಷ್ಟನೆ ಕೇಳಿತ್ತು. ಸರ್ಕಾರ ಇದನ್ನು ಕೂಡ ಸಲ್ಲಿಕೆ ಮಾಡಿದೆ.
ಈಗಾಗಲೇ ಕಾಲುವೆ ಕೂಡ ಸಿದ್ದಗೊಂಡಿದ್ದು, ತಿರುವಿಗೆ ಅವಕಾಶ ಸಿಗಲಿದೆ. ಡಿಪಿಆರ್‍ನಲ್ಲಿ ಯಾವುದಾದರೂ ತಾಂತ್ರಿಕ ದೋಷಗಳಿದ್ದರೆ ಅದನ್ನು ಸರಿಪಡಿಸಿ ಪುನಃ ನ್ಯಾಯಾೀಧಿಕರಣಕ್ಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಕೃಷ್ಣ ನದಿ ನೀರು ನ್ಯಾಯಾೀಕರಣದ ಅಸೂಚನೆಯನ್ನು ಹೊರಡಿಸುವಂತೆ ಮನವಿ ಮಾಡಲಾಗಿದೆ. ಸುಪ್ರೀಂಕೋರ್ಟ್‍ನಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ನ್ಯಾಯಾೀಧಿಶರ ನೇಮಕ ಮಾಡಲು ಮನವರಿಕೆ ಮಾಡುವಂತೆ ವಕೀಲರಿಗೆ ಮನವಿ ಮಾಡಿದ್ದೇವೆ. ಕಡೆಪಕ್ಷ ಮುಕ್ತ ನ್ಯಾಯಾಲಯದಲ್ಲಿ ಇದನ್ನು ಗಮನಕ್ಕೆ ತರಲು ನಿರ್ಧಾರ ಮಾಡಲಾಗಿದೆ ಎಂದರು.
ಮೇಕೆದಾಟು, ಮಹದಾಯಿ ಯೋಜನೆಯಲ್ಲಿ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಸಂಜೆ ಅವರನ್ನು ಭೇಟಿಯಾದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.
